ಬಾಗಲಕೋಟೆ: ಕೊರೊನಾ ಲಾಕ್ಡೌನ್ ಸಮಯದಲ್ಲಿ ಕದ್ದುಮುಚ್ಚಿ ಬಾಲ್ಯ ವಿವಾಹಗಳು ನಡೆದಿವೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ 'ಸುರಕ್ಷಿಣಿ' ಎಂಬ ನೂತನ ವೆಬ್‌ಸೈಟ್ ಸಿದ್ಧಪಡಿಸಿದ್ದು ಸಂಪೂರ್ಣ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದೆ. ಈ ನೂತನ ವೈಬ್ಸೈಟ್ಗೆ ನಿನ್ನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವೆ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆದಿರುವ ಬಗ್ಗೆ ಮಾಹಿತಿ ಇದ್ದು, ಅದರಲ್ಲಿ ಕೆಲವನ್ನು ತಡೆಯಲಾಗಿದೆ. ಐದು ಕುಟುಂಬದವರ ಮೇಲೆ ದೂರು ದಾಖಲಾಗಿದೆ. ಬಾಲ್ಯ ವಿವಾಹ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿವರ್ಹಣಾಧಿಕಾರಿ ಛೂಬಾಲನ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿ ಗಿರಿಯಚಾರ್ಯ ಸೇರಿಕೊಂಡು ಸುರಕ್ಷಿಣಿ ಎಂಬ ವೈಬ್‌ಸೈಟ್ ತಯಾರು ಮಾಡಿದ್ದಾರೆ.
ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದ ಅಧಿಕಾರಿಗಳು ಬಾಲ್ಯ ವಿವಾಹ ನಡೆಯುತ್ತಿರುವ ವಿವರ, ಅದಕ್ಕೆ ಸಂಬಂಧಿಸಿದ ಕುಟುಂಬಸ್ಥರ ವಿವರ, ಬಾಲಕಿ ವಿವರ ಸೇರಿದಂತೆ ಪ್ರತಿಯೊಂದು ಮಾಹಿತಿ ಇರುತ್ತದೆ. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪಿಡಿಒ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾರು ಹೇಗೆ ಕೆಲಸ ಮಾಡಿದ್ದಾರೆ, ಬಾಲ್ಯ ವಿವಾಹ ತಡೆದ ಬಳಿಕ ಬಾಲಕಿ ಎಲ್ಲಿ ಇದ್ದಾಳೆ, ಹೇಗೆ ಇದ್ದಾಳೆ, ಪಾಲಕರು ಯಾವ ರೀತಿಯಾಗಿ ಪೋಷಣೆ ಮಾಡುತ್ತಿದ್ದಾರೆ, ಮನೆಗೆ ಹೋಗಿ ಭೇಟಿ ನೀಡಿದ ಫೋಟೋ, ವಿಡಿಯೋ ಸಮೇತ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗುತ್ತದೆ.
ಯಾವ ಅಧಿಕಾರಿ ಭೇಟಿ ನೀಡಿಲ್ಲವೋ, ಅಂತಹ ಅಧಿಕಾರಿಗಳ ಮೇಲೆ ಸಂಬಂಧಪಟ್ಟ ಮೇಲಧಿಕಾರಿ ಗಮನ ಹರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಅವಕಾಶ ಇದ್ದು, ಈ ವೆಬ್‌ಸೈಟ್ ಸಹಕಾರಿಯಾಗಿದೆ. ಇಂತಹ ವೈಬ್‌ಸೈಟ್ ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಕೊರೊನಾ ಕುರಿತು ಮಾತನಾಡಿದ ಸಚಿವೆ, ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬರುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಕೊರೊನಾ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಹಾಗೂ ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಉಡುಪಿಯಲ್ಲಿ ಸಂಬಳಕ್ಕಾಗಿ ವೈದ್ಯರು, ಸಿಬ್ಬಂದಿಯ ಪ್ರತಿಭಟನೆ: ರೋಗಿಗಳು ಕಂಗಾಲು
ಜಿಲ್ಲೆಯ ಕ್ಷೀರಭಾಗ್ಯ ಹಾಲಿನ ಪುಡಿ ಅಕ್ರಮ ದಾಸ್ತಾನು, ಸಾಗಾಟ ಪ್ರಕರಣ ವಿಚಾರವಾಗಿ ಎಸ್ಪಿ ಲೋಕೇಶ್ ಅವರಿಂದ ಸಚಿವರು ಮಾಹಿತಿ ಪಡೆದರು. ಈಗ ಈ ಪ್ರಕರಣ ತನಿಖೆ ಹಂತದಲ್ಲಿದೆ. ನಮ್ಮ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಕ್ಷೀರಭಾಗ್ಯ ಅಕ್ರಮದ ಬಗ್ಗೆ ತನಿಖಾ ವರದಿ ಬರಲಿ. ವರದಿಯಲ್ಲಿ ತಪ್ಪು ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.