ಬಾಗಲಕೋಟೆ : ಸಂಕ್ರಾಂತಿ ಹಬ್ಬ ಬಂತು ಅಂದರೆ ಸಾಕು ಉತ್ತರ ಕರ್ನಾಟಕದಲ್ಲಿ ವಿಶೇಷ ರೀತಿಯಲ್ಲಿ ಆಚರಣೆ ಮಾಡುವುದು ಗಮನ ಸೆಳೆಯಲಾಗುತ್ತದೆ. ಆದರೆ, ಇಂದಿನ ಆಧುನಿಕ ಯುಗದ ಮೊಬೈಲ್ ಭರಾಟೆಯಿಂದಾಗಿ ಹಿಂದಿನ ಸಂಪ್ರದಾಯ ನಶಿಸಿ ಹೋಗಬಾರದು ಎಂದು ಮುಧೋಳ ಪಟ್ಟಣದ ಸಪ್ತಸ್ವರ ಮಹಿಳಾ ಸಂಘಟನೆಯವರು ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಹಾಕಿಕೊಂಡು ಬರುತ್ತಿದ್ದಾರೆ.
ಬೀಳಗಿ ತಾಲೂಕಿನ ಚಿಕ್ಕ ಸಂಗಮದ ದೇವಾಲಯದಲ್ಲಿ ಸಂಕ್ರಮಣ ಹಬ್ಬದ ಮುನ್ನಾ ದಿನ ಎಲ್ಲ ಮಹಿಳೆಯರು ಸೇರಿಕೊಂಡು ಸಂಪ್ರದಾಯ, ಪದ್ದತಿಯನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಜಿಲ್ಲಾಧಿಕಾರಿ ಕೆ ಎಂ ಜಾನಕಿ ಹಾಗೂ ಉಪ ವಿಭಾಗಾಧಿಕಾರಿ ಶ್ವೇತಾ ಬಿಡಿಕರ ಭಾಗವಹಿಸುವ ಮೂಲಕ ಮತ್ತಷ್ಟು ಶೋಭೆ ತಂದಿದ್ದಾರೆ. ಸಂಕ್ರಾಂತಿ ಹಬ್ಬ ಅಂದರೆ ಉತ್ತರ ಕರ್ನಾಟಕದಲ್ಲಿ ಹಬ್ಬದ ವಾತಾವರಣ. ಎತ್ತುಗಳಿಗೆ ಅಲಂಕಾರ, ಚಕ್ಕಡಿಗಳಿಗೆ ಅಲಂಕಾರ, ಗೋವು ಪೂಜೆ, ಭೂಮಿ ಹಾಗೂ ಗಂಗಾ ಮಾತೆಗೆ ವಿಶೇಷ ಪೂಜೆ - ಪುನಸ್ಕಾರ ಸಲ್ಲಿಸಲಾಗುತ್ತದೆ.
ಹೀಗೆ ವಿವಿಧ ಪ್ರದೇಶಗಳಿಂದ ಬಂದ ಎಲ್ಲ ಮಹಿಳೆಯರು, ಚಕ್ಕಡಿಯಲ್ಲಿ ಕುಳಿತುಕೊಂಡು ಬಂದು, ಪಕ್ಕದಲ್ಲಿಯೇ ಹರಿಯುವ ಕೃಷ್ಣಾ ನದಿಗೆ ಹೋಗಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡುತ್ತಾರೆ. ನಂತರ ಗೋವು ಪೂಜೆ ಹಾಗೂ ಆಹಾರ ತಿನ್ನಿಸುವುದು, ರೈತರ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ, ಪ್ರತಿ ವರ್ಷ ಮಳೆ ಬೆಳೆ ಚನ್ನಾಗಿ ಬರಲಿ, ರೈತ ಕುಟುಂಬಗಳಿಗೆ ಹರ್ಷದಾಯಕ ಇರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ಸಂಕ್ರಾಂತಿ ಹಬ್ಬದ ಅಂಗವಾಗಿ ದೇವಿಯ ರೂಪದಲ್ಲಿ ಮೂರ್ತಿಯನ್ನು ಮಾಡಿ, ಬೇವು ಬೆಲ್ಲ ಹಾಗೂ ಕಬ್ಬು ಸೇರಿದಂತೆ ಇತರ ವಸ್ತುಗಳು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಬಂದ ಎಲ್ಲ ಮಹಿಳೆಯರಿಗೂ ಅರಿಸಿಣ ಹಚ್ಚಿ, ಹೂವಿನ ಹಾರ ತಲೆಗೆ ಕಟ್ಟಿ, ವಿವಿಧ ಸಾಮಗ್ರಿಗಳಿಂದ ಉಡಿ ತುಂಬುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಎಂ ಜಾನಕಿ ಹಾಗೂ ಎಸಿ ಶ್ವೇತಾ ಅವರಿಗೆ ಸಹ ಉಡಿ ತುಂಬಿ ಸಂಕ್ರಾಂತಿ ಹಾಡಿಗೆ ಹೆಜ್ಜೆ ಹಾಕಿಸುವ ಮೂಲಕ ಗಮನ ಸೆಳೆಯಲಾಯಿತು.
ನಂತರ ಎಲ್ಲರೂ ಸೇರಿ ಸಾಮೂಹಿಕವಾಗಿ ಉತ್ತರ ಕರ್ನಾಟಕದ ಶೈಲಿಯ ಶೇಂಗಾ ಹೋಳಿಗೆ, ಶಿರಾ, ಕಾಳು ಪಲ್ಲೆ ಚಟ್ನಿ ಮೊಸರು, ಕಡಕ್ ರೊಟ್ಟಿ, ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆ ಇತರ ಸೊಪ್ಪಿನ ಪಲ್ಲೆಯೊಂದಿಗೆ ಅನ್ನ ಮೊಸರು, ಮಜ್ಜಿಗೆ ಸಾರು ಹೀಗೆ ವಿವಿಧ ಆಹಾರ ತಿನಿಸು ಸೇವನೆ ಮಾಡುತ್ತಾರೆ. ತದನಂತರ ಸಂಕ್ರಾಂತಿ ಬಂತು ಎಂಬ ಹಾಡಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುತ್ತಾರೆ. ಇದರ ಜೊತೆಗೆ ಬೀಸುವ ಕಲ್ಲು, ರುಬ್ಬುವ ಕಲ್ಲು ಮುಂದೆ ಕುಳಿತುಕೊಂಡು ಜಾನಪದ ಹಾಡು ಹಾಡುತ್ತಾ ಸಂಪ್ರದಾಯ ಪದ್ದತಿಯನ್ನು ಮೆಲುಕು ಹಾಕುತ್ತಾರೆ.
ಇಂದಿನ ಯುವತಿಯರು ಹೆಚ್ಚಾಗಿ ಆಧುನಿಕ ಯುಗದ ಭರಾಟೆಯಿಂದಾಗಿ ಹಿಂದಿನ ಪದ್ದತಿ ಮರೆತು ಹೋಗುತ್ತಿದ್ದಾರೆ. ಹಿಂದಿನ ಕಾಲದ ಪದ್ದತಿ ಉಳಿಸುವ ನಿಟ್ಟಿನಲ್ಲಿ ಮುಧೋಳದ ಸಪ್ತಸ್ವರ ಸಂಘದ ಮುಖಂಡರಾದ ಜ್ಯೋತಿ ಪಾಟೀಲ ಹಾಗೂ ನಿರ್ಮಲಾ ಮಲಘಾಣ ಇವರ ತಂಡದ ಸದಸ್ಯರು ತಮ್ಮ ಸ್ವಂತ ವೆಚ್ಚದಲ್ಲಿ ಇಷ್ಟೆಲ್ಲ ಮಾಡಿಕೊಂಡು ಬರುತ್ತಾರೆ. ಯಾರೊಬ್ಬರ ಪ್ರಾಯೋಜಕತ್ವ, ಸಹಾಯ ಹಾಗೂ ಸರ್ಕಾರ ಮತ್ತು ರಾಜಕಾರಣಿಗಳ ಪ್ರೋತ್ಸಾಹ ಇಲ್ಲದೇ ಮಹಿಳೆಯರು ಸೇರಿಕೊಂಡು ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ನಶಿಸಿ ಹೋಗುತ್ತಿರುವ ಸಂಪ್ರದಾಯ ಪದ್ದತಿ ಬೆಳೆಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ : ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೊರಟ ಹುಬ್ಬಳ್ಳಿಯ ಯುವಕ: ಶ್ರೀರಾಮನ ದರ್ಶನಕ್ಕೆ ಪಾದಯಾತ್ರೆ