ಬಾಗಲಕೋಟೆ: ನವಿಲು ತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ರಿಲೀಸ್ ಹಿನ್ನೆಲೆ, ಮತ್ತೆ ಮಲಪ್ರಭಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಬಾದಾಮಿ ತಾಲೂಕಿನ 34 ಹಳ್ಳಿಗಳ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಲಿದ್ದು, ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಬಾದಾಮಿ ತಾಲೂಕಿನ ಗೋವನಕೊಪ್ಪ, ತಳಕವಾಡ, ಬೀರನೂರು, ಹೆಬ್ಬಳ್ಳಿ, ಸುಳ್ಳ, ಕರ್ಲಕೊಪ್ಪ, ಹಾಗನೂರು, ಆಲೂರ ಎಸ್ ಕೆ, ಕಳಸ, ಕಿತ್ತಲಿ ಸೇರಿದಂತೆ 34 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಪ್ರವಾಹ ಭೀತಿ ಶುರುವಾಗಿದೆ. ಗೋವನಕೊಪ್ಪ ಸೇತುವೆಗೆ ಬಾದಾಮಿ ತಹಶೀಲ್ದಾರ ಸುಹಾಸ್ ಇಂಗಳೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೇತುವೆಯಲ್ಲಿ ಸಿಲುಕಿದ ಮುಳ್ಳಿನ ಕಂಟಿ ತೆರವುಗೊಳಿಸಲು ತಹಶೀಲ್ದಾರ ಸೂಚನೆ ನೀಡಿದ್ದಾರೆ. ಇನ್ನು 2 ಮಲಪ್ರಭಾ ನದಿ ತೀರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರವಾಹ ಭೀತಿಯ ಬಗ್ಗೆ ತಹಶೀಲ್ದಾರರು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನದಿ ದಂಡೆಯ ಬಳಿ ಹೋಗದಂತೆ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.