ಬಾಗಲಕೋಟೆ: ಕಳೆದ ತಿಂಗಳು ಪ್ರವಾಹದಿಂದ ಕೊಚ್ಚಿ ಹೋಗಿದ್ದ ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಸೇತುವೆಯು ಪುನರ್ ನಿರ್ಮಾಣ ಮಾಡಿದ್ದು, ಜಮಖಂಡಿ ಮತಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ಅವರು ಇಂದು ವಾಹನ ಸಂಚಾರಕ್ಕೆ ಅದನ್ನ ಮುಕ್ತಗೊಳಿಸಿದರು.
ಕೃಷ್ಣ ನದಿಯ ಪ್ರವಾಹದಿಂದ ಇಡೀ ಸೇತುವೆ ಹಾಳಾಗಿ ಹೋಗಿತ್ತು. ಇದರಿಂದ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿ ಎರಡು ತಿಂಗಳಿನಿಂದ ಸಂಚಾರ ಸ್ಥಗಿತಗೊಂಡಿತ್ತು. ಗಲಗಲಿ ಮೂಲಕ ಸುತ್ತುವರೆದು ಸಂಚಾರ ಮಾಡುವುದು ಅನಿವಾರ್ಯವಾಗಿತ್ತು. ಇದು ಪ್ರಯಾಣಿಕರಿಗೆ ಹಣ,ಸಮಯ ವ್ಯರ್ಥ ಆಗುತ್ತಿತ್ತು.
ಲೋಕೋಪಯೋಗಿ ಇಲಾಖೆ ವತಿಯಿಂದ 1.60 ಕೋಟಿ ವೆಚ್ಚದಲ್ಲಿ ಒಂದು ತಿಂಗಳಿಗೂ ಹೆಚ್ಚು ದಿನ ಕೆಲಸ ನಡೆಸಿ, ಸುಸಜ್ಜಿತ ವಾದ ಸೇತುವೆ,ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.
ಸೇತುವೆ ಮೇಲೆ ಸಂಚರಿಸಿದ ಶಾಸಕರು, ಮುಕ್ತಾಯಗೊಂಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇದರಿಂದ ಸುತ್ತುಮುತ್ತಲಿನ ಗ್ರಾಮಸ್ಥರಿಗೆ ಹಾಗೂ ವಿಜಯಪುರಕ್ಕೆ ಹೋಗುವ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲಕರವಾಗಲಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ.