ಬಾಗಲಕೋಟೆ: ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿಯನ್ನು ರಾಜ್ಯ ಸರ್ಕಾರ ಅಕ್ಟೋಬರ್ 31 ರ ಒಳಗಾಗಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಯಡಿಯೂರಪ್ಪ ಲಿಂಗಸುಗೂರಿನಲ್ಲಿ ನಡೆದ ಎಸ್ಟಿ ಸಮಾವೇಶದಲ್ಲಿ ಈ ಮಾತು ಕೊಟ್ಟಿದ್ದೀರಿ. ಸಿಎಂ ಆಗಿ 24 ಗಂಟೆಯೊಳಗೆ ಶೇ 7.5ರಷ್ಟು ಮೀಸಲಾತಿ ಕೊಡಿಸೋದಾಗಿ ಹೇಳಿದ್ದೀರಿ. ಸಿಎಂ ಆದ ಬಳಿಕ ಫೆಬ್ರವರಿ 9 ಮಹರ್ಷಿ ವಾಲ್ಮೀಕಿ ಜಾತ್ರಾಮಹೋತ್ಸವದಲ್ಲಿಯೂ ಇದೇ ಮಾತು ಕೊಟ್ಟಿದ್ರಿ. ಆದರೆ, ಎರಡು ಬಾರಿ ಮಾತು ಕೊಟ್ಟರೂ ವಿಳಂಬ ಮಾಡುತ್ತಿದ್ದೀರಿ, ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಅಕ್ಟೋಬರ್ ಅಂತ್ಯದೊಳಗೆ ಸಿಹಿ ಸುದ್ದಿ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡೋದಾಗಿ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದರು.
ಎಸ್ಟಿ ಮೀಸಲಾತಿ ಹೋರಾಟಕ್ಕಾಗಿ ಅಕ್ಟೋಬರ್ 31 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮುಲು ಸಚಿವ ಸ್ಥಾನ ಬದಲಾವಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಅವರ ಜೊತೆ ಮಾತನಾಡಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಸದ್ಯ ನಾವು ಮೀಸಲಾತಿ ಹೋರಾಟದ ಬಗ್ಗೆ ಹೋರಾಟ ನಡೆಸಿದ್ದೇವೆ, ರಾಮುಲುಗೆ ಡಿಸಿಎಂ ಸ್ಥಾನ ವಿಚಾರ ಮಾದ್ಯಮದಲ್ಲಿ ನೋಡುತ್ತಲೇ ಇದ್ದೇವೆ. ಆದರೆ ಯಾವ ನಾಯಕರು ಹೇಳಿದ್ದನ್ನು ನೋಡಿಲ್ಲ. ಡಿಸಿಎಂ ಸ್ಥಾನ ಕೊಡದಿರೋದನ್ನು ಕೂಡ ನಾವು ಖಂಡಿಸುತ್ತೇವೆ ಎಂದರು.