ಬಾಗಲಕೋಟೆ: ನಗರದ ಡಾ. ಪ್ರಹ್ಲಾದ ಭೋವಿ ಎಂಬುವರು ಕಳೆದ 15 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಾ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡುವ ಜೊತೆಗೆ ರಾಜ್ಯದ ವಿವಿಧ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಡೆಸಿಕೊಂಡು ಬರುವುದರ ಜೊತೆ ಹಲವು ಸಾಧನೆಗೈದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ, ವಯಸ್ಕರಿಗೆ ಅಕ್ಷರ ಜ್ಞಾನದ ಜಾಗೃತಿ ಮೂಡಿಸಿದ್ದಾರೆ. ಹೆಚ್ಐವಿ ಸೋಂಕು ತಡೆಯುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಪ್ರಚಾರ ಮಾಡಿದ್ದಾರೆ. ಗಿಡ ಮರಗಳನ್ನು ಬೆಳೆಸಿ ಎಲ್ಲೆಡೆ ಹಚ್ಚಹಸಿರಾಗುವಂತೆ ಮಾಡಿ ಪರಿಸರದ ಕಾಳಜಿ ಮೆರೆದಿದ್ದಾರೆ. ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಮಾಡುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡಿ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಸಾಕ್ಷರತೆ ಬಗ್ಗೆ ಸ್ವತಃ ಹಾಡು ಬರೆದು ಪುಸ್ತಕ ರೂಪದಲ್ಲಿ ಹೂರಹಾಕಿದ್ದು, ಸಾಹಿತ್ಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಕೋವಿಡ್ -19 ಕರಾಳ ದಿನಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಮಂಗಳಮುಖಿಯರಿಗೆ, ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಹೀಗೆ ಸಾಕಷ್ಟು ಕಾರ್ಯಗಳನ್ನು ಮಾಡಿರುವ ಇವರಿಗೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇವರ ಮನೆಯಲ್ಲಿ ಎಲ್ಲಿ ನೋಡಿದರೂ ಪ್ರಶಸ್ತಿಗಳೇ ಕಂಡುಬರುತ್ತಿವೆ.
ಇದನ್ನೂ ಓದಿ: ಭಲೇ ಶ್ವಾನ.. ಹಾಸನದಲ್ಲಿ ಹಾವಿನಿಂದ ಮನೆಯವರ ಪ್ರಾಣ ಉಳಿಸಿದ ನಾಯಿ
ಈ ಎಲ್ಲಾ ಸಾಧನೆಯಿಂದ ಕಳೆದ ತಿಂಗಳು ಲಂಡನ್ನ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಬಂದಿದ್ದು, ಮಧ್ಯ ಪ್ರದೇಶದ ಇಂಧೋರ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದರ ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಸೇರಿದಂತೆ ವಿವಿಧ ಬಗೆಯ ಸುಮಾರು ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲಿ ಎಂದು ಆಶಿಸೋಣ.