ಬಾಗಲಕೋಟೆ: ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಕೆಹೆಚ್ಡಿಸಿ ನಿಧಿಯಿಂದ ನೇಕಾರರಿಗೆ ಆಹಾರ ಧಾನ್ಯಗಳ ವಿತರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಮಧ್ಯೆ ಜಟಾಪಟಿ ನಡೆದಿದೆ.
ಕೆಹೆಚ್ಡಿಸಿ ನೇಕಾರರ ನಿಧಿಯಲ್ಲಿ ₹ 47 ಲಕ್ಷ ಇದೆ. ಈ ಹಣದಿಂದ ಶಾಸಕ ಸಿದ್ದು ಸವದಿ ಅವರು ಬಡ ನೇಕಾರರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಆದರೆ, 1,452 ನೇಕಾರರ ಕುಟುಂಬಗಳಿದ್ದರೂ, 8 ಸಾವಿರಕ್ಕೂ ಅಧಿಕ ನೇಕಾರರಿಗೆ ಕಿಟ್ ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಇದು ಜಟಾಪಟಿಗೆ ಕಾರಣವಾಗಿದೆ.
ಅದಲ್ಲದೆ, ಶಾಸಕ ಸಿದ್ದು ಸವದಿ ಅವರು, ಸರ್ಕಾರದಿಂದ ನೀಡುವ ಕಿಟ್ಗಳಿಗೆ ತಮ್ಮ ಭಾವಚಿತ್ರ ಮತ್ತು ಬಿಜೆಪಿ ಪಕ್ಷದ ಚಿಹ್ನೆ ಸ್ಟಿಕ್ಕರ್ ಅಂಟಿಸಿ ಹಂಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ನಗರಸಭೆಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಚಿವೆ ಉಮಾಶ್ರೀ ಅವರು, ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಕ್ಷೇತ್ರದಲ್ಲಿ ನೇಕಾರರಿರುವುದು 1,452 ಮಾತ್ರ. ಆದರೆ, 8 ಸಾವಿರಕ್ಕೂ ಅಧಿಕ ನೇಕಾರರಿಗೆ ಕಿಟ್ ನೀಡಲಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಉಳಿದವರು ಎಲ್ಲಿಂದ ಬಂದರು ಎಂದು ಪ್ರಶ್ನಿಸಿದರು. ಆಹಾರ ಧಾನ್ಯಕ್ಕಾಗಿ ಎಷ್ಟು ಹಣ ಬಿಡುಗಡೆ ಮಾಡಿದಿರಿ ಎಂದು ನಗರಸಭೆ ಅಧಿಕಾರಿಗಳಿಗೆ ಸಚಿವೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ, ಶಾಸಕ ಸಿದ್ದು ಸವದಿ, ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದ್ದರು. ಅಲ್ಲದೆ, ಉಮಾಶ್ರೀ ಅವರಿಗೆ ಏಕವಚನದಲ್ಲಿ ನಿಂದಿಸಿದ್ದರು. ಎರಡೂ ಪಕ್ಷಗಳ ನಡುವಿನ ಜಟಾಪಟಿಗೆ ಇದು ಮತ್ತಷ್ಟು ತುಪ್ಪ ಸುರಿದಂತಾಗಿದೆ.