ಬಾಗಲಕೋಟೆ : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ಯುವತಿಯ ಮೂಲ ಪತ್ತೆಗಾಗಿ ಗುಪ್ತಚರ ಇಲಾಖೆ ಪೊಲೀಸರು ಬೆನ್ನುಹತ್ತಿ ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ಇತ್ತ ಯುವತಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಗ್ರಾಮದ ಜನರು ಧೈರ್ಯ ತುಂಬಿದ್ದಾರೆ.
ವಿಜಯಪುರ ಜಿಲ್ಲೆಯ ನಿವಾಸಿಯಾದ ಯುವತಿ ಮನೆಗೆ ಪೊಲೀಸರು ಭೇಟಿ ನೀಡಿ ನೋಟಿಸ್ ಹಚ್ಚಿದ್ದಾರೆ. ಅದರ ಜೊತೆಗೆ ಸಿಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿ ತಂದೆಯ ಊರಿಗೆ ಗುಪ್ತಚರ ಇಲಾಖೆ ಸಿಬ್ಬಂದಿ ಗೌಪ್ಯ ಭೇಟಿ ನೀಡಿ, ಅಕ್ಕಪಕ್ಕದವರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಊರು ಬಿಟ್ಟಿರುವ ಯುವತಿ ಕುಟುಂಬಸ್ಥರು
ಯುವತಿಯ ಅಜ್ಜಿ(ಅಪ್ಪನ ತಾಯಿ) ವಾಸವಾಗಿದ್ದಾರೆ ಎನ್ನುವ ಮಾಹಿತಿ ಇದೆ. ಅಜ್ಜಿಗೆ ವಯಸ್ಸಾದ ಕಾರಣ ಕಣ್ಣು ಮಂಜಾಗಿದ್ದು ಹೆಚ್ಚಿನ ಮಾಹಿತಿ ಕೇಳಲು ಸಾಧ್ಯವಾಗದೆ, ಅಕ್ಕಪಕ್ಕದ ಮನೆಯವರ ಹತ್ತಿರ ಮಾಹಿತಿ ಕೇಳಿದ್ದಾರೆ. ಆದ್ರೆ ಯುವತಿ ಮಾತ್ರ ಗ್ರಾಮಕ್ಕೆ ಬಂದಿಲ್ಲ. ಮೂವತ್ತು ವರ್ಷದ ಹಿಂದೆ ಗ್ರಾಮ ಬಿಟ್ಟು ಹೋಗಿರುವ ಯುವತಿ ತಂದೆ, ತಾಯಿ ಹಾಗೂ ಇತರೆ ಸಂಬಂಧಿಕರು, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಮಾತ್ರ ಬಂದು ಹೋಗುತ್ತಾರೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಯುವತಿ ಅಜ್ಜಿ ಮನೆ ಸುತ್ತ ಖಾಕಿ ಕಣ್ಗಾವಲು, ಯುವತಿಗೆ ಗ್ರಾಮಸ್ಥರ ಆತ್ಮಸ್ಥೈರ್ಯ
ಗ್ರಾಮದಲ್ಲಿದ್ದಾರೆ ಎನ್ನಲಾದ ಯುವತಿಯ ಅಜ್ಜಿ ಮನೆಯ ಮೇಲೆ ಖಾಕಿ ಕಣ್ಗಾವಲು ಹಾಕಿದೆ. ಗುಪ್ತಚರ ಇಲಾಖೆಯವರು ಸಹ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಇದರ ಬೆನ್ನಲ್ಲೇ ಗ್ರಾಮದ ಜನತೆ ಯುವತಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಹ ಮಾಡುತ್ತಿದ್ದು, ಇದ್ದು ಗೆಲ್ಲಬೇಕು. ಧೈರ್ಯವಾಗಿರು ಎಂಬ ಮಾತು ಹೇಳಿದ್ದಾರೆ.
ಯುವತಿ ಬಗ್ಗೆ ಗ್ರಾಮದಲ್ಲಿ ಬಹುತೇಕ ಜನರಿಗೆ ಮಾಹಿತಿ ಇಲ್ಲ. ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿರುವ ಕಾರಣ, ಗ್ರಾಮದ ಸಾಮಾಜಿಕ ಕಾರ್ಯಕರ್ತೆ ಸಹನಾ ಅಂಗಡಿ ಹಾಗೂ ಇತರ ಕೆಲ ಯುವಕರು ಧೈರ್ಯ ತುಂಬಿದ್ದಾರೆ. ಜೀವಕ್ಕೆ ಏನಾದ್ರೂ ಮಾಡಿಕೊಂಡ್ರೆ ನಿಮಗೆ ನ್ಯಾಯ ಸಿಗಲ್ಲ, ನೀವು ಇದ್ದು ನ್ಯಾಯ ಗೆಲ್ಲಬೇಕು. ನಿಮಗೆ ತೊಂದ್ರೆ ಇದ್ರೆ ಗ್ರಾಮಸ್ಥರನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.