ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಬಾದಾಮಿ ತಾಲೂಕಿನ ಢಾಣಕಶಿರೂರು ಗ್ರಾಮದಲ್ಲಿ ಗರ್ಭಿಣಿ ಮಹಿಳೆಯಿಂದ ಒಬ್ಬರಿಗೆ ಸೋಂಕು ತಗುಲಿದೆ.
ಢಾಣಕಶಿರೂರು ಗ್ರಾಮದಲ್ಲಿ ಸಂಪೂರ್ಣ ಸೀಲ್ಡೌನ್ ಆಗಿರುವ ಪರಿಣಾಮ ಎಲ್ಲರಿಗೂ ಶೌಚಾಲಯ ಸಮಸ್ಯೆ ಉಂಟಾಗಿದೆ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಶೇಕಡಾ 70 ರಷ್ಟು ಜನರು ಬಯಲು ಶೌಚಾಲಯ ಬಳಸುತ್ತಿದ್ಧಾರೆ. ಕೆಲವೇ ಮಂದಿ ಮಾತ್ರ ಮನೆಯಲ್ಲೇ ಶೌಚಾಲಯ ಕಟ್ಟಿಸಿಕೊಂಡಿರುತ್ತಾರೆ. ಆದರೆ ಇದೀಗ ಸೀಲ್ಡೌನ್ ಇರುವುದರಿಂದ ಜನರು ಶೌಚಾಲಯದ ತೊಂದರೆ ಅನುಭವಿಸುತ್ತಿದ್ದಾರೆ. ಯಾರೂ ಹೊರಬಾರದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಬಯಲು ಶೌಚಾಲಯ ಅವಲಂಬಿಸಿದ್ದವರು ಈಗ ಶೌಚಾಲಯಕ್ಕೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ 128 ಜನರನ್ನು ಕ್ವಾರಂಟನ್ನಲ್ಲಿಟ್ಟಿರುವುದರಿಂದ ಮನೆಯಲ್ಲಿ ದನ-ಕರುಗಳಿಗೆ ಮೇವು ಹಾಕುವವರು ಯಾರೂ ಇಲ್ಲದಂತಾಗಿದೆ ಎಂದು ಕ್ವಾರಂಟೈನ್ನಲ್ಲಿರುವ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿ.ಪಂ ಸಿಇಓ ಪ್ರತಿಕ್ರಿಯಿಸಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಮೂಲಕ ಕ್ವಾರಂಟೈನ್ನಲ್ಲಿರುವವರ ಮಾಹಿತಿ ಪಡೆದು ಜಾನುವಾರುಗಳಿಗೆ ಮೇವು ಹಾಕುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆ ಆಗಿದ್ದು 20 ವರ್ಷದ ವ್ಯಕ್ತಿ (ಪಿ-854) ಹಾಗೂ ಢಾಣಕಶಿರೂರ ಗ್ರಾಮದ 28 ವರ್ಷದ ವ್ಯಕ್ತಿಗೆ (ಪಿ-855) ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಪಿ-854 ಗೆ ಅಹಮದಾಬಾದ್ನಿಂದ ಬಂದ ಹಿನ್ನೆಲೆ ಸೋಂಕು ತಗುಲಿದೆ. ಅಹಮದಾಬಾದ್ನಿಂದ ಬಂದಿದ್ದ 12 ಮಂದಿ ಪ್ರಯಾಣಿಕರಲ್ಲಿ 11 ಜನರ ವರದಿ ನೆಗೆಟಿವ್ ಬಂದಿದ್ದು ಓರ್ವನಿಗೆ ಮಾತ್ರ ಪಾಸಿಟಿವ್ ಆಗಿದೆ. ಪಿ-688 ಗರ್ಭಿಣಿ ಮಹಿಳೆ ಸಂಪರ್ಕದಿಂದ ಪಿ-855 ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯಿಂದ ಒಟ್ಟು 120 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಿದ್ದು ಅದರಲ್ಲಿ 118 ಜನರ ವರದಿ ನೆಗೆಟಿವ್ ಬಂದಿದೆ. ಹೊಸದಾಗಿ ಮತ್ತೆ 52 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ. 938 ಮಂದಿಯನ್ನು ಇನ್ನೂ ನಿಗಾದಲ್ಲಿ ಇಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 53 ಪ್ರಕರಣಗಳಲ್ಲಿ 21 ಮಂದಿ ಗುಣಮುಖರಾಗಿದ್ದರೆ ಒಬ್ಬರು ಮೃತಪಟ್ಟಿದ್ಧಾರೆ.