ಬಾಗಲಕೋಟೆ: ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನುಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವುದೆಂದರೆ ಸುಮ್ಮನೆಯಾ?.. ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಇರುತ್ತಾಳೆ ಅನ್ನೋದು ಇದೇನಾ. ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿದೆ.
ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಂಗಳವಾರ ಪೇಟೆ ನಿವಾಸಿ ಭೀಮಪ್ಪ ಬಾಗಲಕೋಟ (80) ಮತ್ತು ಇವರ ಪತ್ನಿ ಕಸ್ತೂರಿ (74) ಸಾವಿನಲ್ಲೂ ಒಂದಾದ ದಂಪತಿ. ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಪ್ಪ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ 1 ಗಂಟೆಗೆ ನಿಧನ ಹೊಂದಿದ್ದರು.
ಆರೋಗ್ಯವಾಗಿಯೇ ಮನೆಯಲ್ಲಿದ್ದ ಪತ್ನಿ ಕಸ್ತೂರಿ ಗಂಡ ಭೀಮಪ್ಪ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತದಿಂದ ಬೆಳಗಿನ ಜಾವ 4 ಗಂಟೆಗೆ ನಿಧನರಾದರು.ಇಂದು ಅವರ ಮನೆಯಲ್ಲಿ ಕುಟುಂಬಸ್ಥರು ದಿವಂಗತ ದಂಪತಿಯನ್ನು ಜೋಡಿಯಾಗಿಯೇ ಕೂಡಿಸಿ ಅಂತ್ಯ ಕ್ರಿಯೆ ನಡೆಸಿದ್ದಾರೆ.
ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ: 55 ವರ್ಷದ ದಾಂಪತ್ಯದಲ್ಲಿ ಕಲಹವೇ ಇರಲಿಲ್ಲವಂತೆ !