ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ, ಜನವರಿ 14ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತೆಲಂಗಾಣ ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.
ಇನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಅದೇ 14ರಂದು, ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವ ಸಮಾರಂಭವು ಆಯೋಜಿಸಲಾಗಿದೆ. ಹರಿಹರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ. ಟಿ. ರವಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಭಾಗವಹಿಸಲಿದ್ದಾರೆ.
ಈ ಮೊದಲೇ ಪಂಚಮಸಾಲಿಯ ಎರಡು ಪೀಠಗಳಾಗಿದ್ದರಿಂದ ಸಮುದಾಯದವರಿಗೆ ಅಸಮಾಧಾನವಿತ್ತು. ಯಾವ ಪೀಠಕ್ಕೆ ನಡೆದುಕೊಳ್ಳಬೇಕು ಎಂಬುದು ರಾಜ್ಯದಲ್ಲಿ ಚರ್ಚೆಯ ವಿಷಯವಾಗಿತ್ತು.ಇದೀಗ ಮತ್ತೆ ಎರಡು ಪ್ರತೇಕ ಪೀಠದಿಂದ ಜನವರಿ 14ರಂದು ಒಂದೇ ದಿನ ಸಮಾರಂಭ ಇರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಮುರಗೇಶ ನಿರಾಣಿ ಅವರ ಸಹಕಾರದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇತ್ತ ಕೂಡಲಸಂಗಮದಲ್ಲಿ ಪ್ರತಿವರ್ಷ ಜನವರಿ 14 ರಂದು ಬಸವ ಕೃಷಿ ಪ್ರಶಸ್ತಿ ಸಮಾರಂಭ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಹರಿಹರ ಪೀಠದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡು ಟಾಂಗ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.