ಬಾಗಲಕೋಟೆ : ಯಾರಾದರೂ ನನ್ನ ಬಗ್ಗೆ ಕಿಂಡಲ್ ಮಾಡಿದರೆ ಅದರ ಕಥೆಯೇ ಬೇರೆ ಆಗುತ್ತದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಏನೇ ಹೇಳಿದರೂ ಮೌನವಾಗಿರುತ್ತೇನೆ ಎಂದು ತಿಳಿಯಬೇಡಿ. ಇಲಿಗೆ ಹೊಡೆದರೆ ಗಣಪತಿಗೆ ಪೆಟ್ಟು ಆಗುತ್ತದೆ ಎಂಬ ಕಾರಣದಿಂದ ಸುಮ್ಮನಿದ್ದೆ. ಇನ್ನು ಮುಂದೆ ಏನಾದರೂ ಮಾತನಾಡಿದರೆ ಸಹಿಸಲ್ಲ ಎಂದು ಅವರು, ನೀವೂ ಸಹ ಚುನಾವಣೆಯಲ್ಲಿ ವಿಜಯಪುರ ಸಚಿವರಿಗೆ ಯಾವ ರೀತಿಯಾಗಿ ಚೇಲಾ ಆಗಿ ಕೆಲಸ ಮಾಡಿದಿರಿ ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು.
ಮುಂಬರುವ ಚುನಾವಣೆ ಇಟ್ಟುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಪ್ರಧಾನ ಮಂತ್ರಿ ಮೋದಿ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕಾಗಿದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ. ನಂದು ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ನಿಮ್ಮ ತಪ್ಪಿದ್ದರೆ ನೀವು ತಿದ್ದಿಕೊಳ್ಳಿ. ಕಾರ್ಯಕರ್ತರ ತಪ್ಪನ್ನು ಅವರು ತಿದ್ದಿಕೊಳ್ಳುತ್ತಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದೆಯೇ ನಿರಾಣಿ ಪರೋಕ್ಷವಾಗಿ ತಮ್ಮ ಎದುರಾಳಿಗಳ ವಿರುದ್ಧ ಗುಡುಗಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರು ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ : ಇನ್ನೊಂದೆಡೆ, ರಾಜ್ಯ ಬಿಜೆಪಿ ಪಾಳಯದಲ್ಲಿ ನೂತನ ಸಾರಥಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಆರಂಭಗೊಂಡಿದೆ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಪೈಪೋಟಿ ಇದೀಗ ಬಹಿರಂಗವಾಗಿಯೇ ನಡೆಯಲು ಆರಂಭಗೊಂಡಿದೆ. ಕುರ್ಚಿಗಾಗಿ ಇನ್ನಿಲ್ಲದ ಕಸರತ್ತು ಕೂಡಾ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬಹಳ ಮಹತ್ವದ್ದಾಗಿದೆ. ಪಕ್ಷಕ್ಕೆ ಲಾಭದಾಯಕವಾಗಿ ಕೆಲಸ ಮಾಡಬಲ್ಲ ಸಂಘಟನಾ ಚತುರನ ಆಯ್ಕೆ ಇದೀಗ ಬಿಜೆಪಿ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಿದೆ. ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ನೂತನ ನಾಯಕನ ಆಯ್ಕೆ ಸುಳಿವು ಸಿಗುತ್ತಿದ್ದಂತೆ ನಾ ಮುಂದು ತಾ ಮುಂದು ಎನ್ನುವಂತೆ ರಾಜ್ಯ ಬಿಜೆಪಿ ನಾಯಕರು ಅವಕಾಶಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆಯಲ್ಲಿದ್ದು, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಸುನೀಲ್ ಕುಮಾರ್ ಹೆಸರುಗಳು ರೇಸ್ನಲ್ಲಿವೆ. ಅಶ್ವತ್ಥ್ನಾರಾಯಣ್ ಹೆಸರೂ ಚಾಲ್ತಿಯಲ್ಲಿದೆ. ಅಶೋಕ್ ಕೂಡ ಲಾಬಿ ನಡೆಸುತ್ತಿದ್ದಾರೆ. ಇವರ ಜೊತೆಗೆ ಇದೀಗ ವಿ. ಸೋಮಣ್ಣ ಸೇರಿಕೊಂಡಿದ್ದು, ಬಹಿರಂಗವಾಗಿಯೇ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿಶ್ವ ಬ್ಯಾಂಕ್ ಅನುದಾನಿತ ಯೋಜನೆಗಳ ಕುರಿತು ಚರ್ಚೆ: ಚೆಲುವರಾಯಸ್ವಾಮಿ