ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸಯಜಯ ಮೃತ್ಯುಂಜಯ ಸ್ವಾಮೀಜಿಗೆ ಬಾಗಲಕೋಟೆ ನಗರದಲ್ಲಿ ಸಚಿವ ಮುರಗೇಶ ನಿರಾಣಿ ಅವರು, ನೇರ ಸವಾಲು ಹಾಕಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಿದರೆ ಇವತ್ತೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಸಾಬೀತು ಮಾಡದೇ ಇದ್ದಲ್ಲ ನೀವು ಸನ್ಯಾಸತ್ವ ತೊರೆದು ರಾಜಕೀಯಕ್ಕೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ನಿನ್ನೆ ಸಂದರ್ಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ಆಗದೇ ಇರಲು ಬಾಗಲಕೋಟೆ ಜಿಲ್ಲೆಯ ನಮ್ಮ ಸಮಾಜದ ಸಚಿವರು ಕಾರಣ ಎಂದು ಸ್ವಾಮೀಜಿ ಆರೋಪಿಸಿದ್ದಕ್ಕೆ ಸಚಿವ ನಿರಾಣಿ ಅವರು ಗರಂ ಆಗಿದ್ದಾರೆ. ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ನನ್ನ ಬಗ್ಗೆ ಎಷ್ಟೇ ಮಾತಾಡಿದರೂ, ಇವತ್ತು ಎಲ್ಲೆ ಭೇಟಿ ಮಾಡಿದರೂ ನಿಮ್ಮ ಕಾಲಿಗೆ ನಮಸ್ಕಾರ ಮಾಡ್ತೇನೆ ಎಂದರು.
ಆದರೆ, ನಾನು ಮೊನ್ನೆ ಪಂಚಮಸಾಲಿ ಮೀಸಲಾತಿ ಕೊಡಲು ಅಡ್ಡಿ ಮಾಡಿದೆ ಎನ್ನಲು ಸಾಕ್ಷಿ ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ನೀವು ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ ಎಂದು ಪಂಥಾಹ್ವಾನ ಕೊಟ್ಟರು.
ನಾವು ಮನಸ್ಸು ಮಾಡಿದರೆ ಇಡೀ ರಾಜ್ಯದಲ್ಲಿ ಅವರನ್ನು ಸೋಲಿಸುತ್ತೇವೆ ಇವರನ್ನು ಸೋಲಿಸುತ್ತೇವೆ ಎನ್ನುವ ಸ್ವಾಮೀಜಿ ಹೇಳಿಕೆಗೆ ಕಿಡಿ ಕಾರಿದ ಸಚಿವರು 2014, 2018 ಮತ್ತು 2019ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರ ಪರ ಪ್ರಚಾರ ಮಾಡಿದ್ದೀರಿ. ಯಾರು ಗೆದ್ದಿದ್ದಾರೆ ಹೇಳಿ. ಸೋಲು ಗೆಲುವು ಮತದಾರರ ಕೈಯಲ್ಲಿದೆ ಎಂದರು.
ಇವತ್ತು ಲಕ್ಷಾಂತರ ಜನರು ನಿಮ್ಮ ಹಿಂದೆ ಬಂದಿದ್ದಾರೆ ಅಂದರೆ, ನಮಗೆ 2ಎ ಮೀಸಲಾತಿ ಸಿಗಬೇಕು ಅಂತ ಬಂದಿದ್ದಾರೆ. ನಿಮ್ಮ ನಡತೆ, ನಡವಳಿಕೆ ನೋಡಿ ಅಲ್ಲ. ದೊಡ್ಡ ಸ್ಥಾನದಲ್ಲಿ ಇದ್ದೀರಿ, ಬಾಯಿ ಚಪಲಕ್ಕೆ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಸ್ವಾಮೀಜಿಗೆ ಟಾಂಗ್ ನೀಡಿದರು.
ಮಾಜಿ ಶಾಸಕ ಕಾಶಪ್ಪನವರ್ಗೆ ನಿರಾಣಿ ಟಾಂಗ್ : 2ಎ ಕೊಡದಿದ್ದರೆ ನಾನು ಬಾರಕೋಲ್ ಚಳವಳಿ ಮಾಡುತ್ತೇನೆ ಎಂದು ಮಾಜಿ ಶಾಸಕ ಕಾಶಪ್ಪನವರ್ ಹೇಳಿಕೆ ವಿಚಾರವಾಗಿ ಕಿಡಿಕಾರಿದ ಸಚಿವ ಮುರಗೇಶ ನಿರಾಣಿ, ನಿಮ್ಮ ತಂದೆ ಮಂತ್ರಿಯಾಗಿದ್ದಾಗ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: '2ಎ ಮೀಸಲಾತಿ ನೀಡಿದ್ರೆ ವಿಜಯೋತ್ಸವ, ಇಲ್ಲದಿದ್ದರೆ ಡಿ.22ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ'