ಬಾಗಲಕೋಟೆ: ಮುಧೋಳ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಇಂದು ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಅವ್ಯವಸ್ಥೆ, ಸೌಕರ್ಯದ ಬಗ್ಗೆ ರೋಗಿಗಳು, ಹೆರಿಗೆಗೆ ಬಂದವರು, ಜನರ ಜೊತೆ ವಿಚಾರಣೆ ನಡೆಸಿದರು. ಈ ವೇಳೆ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ, ವೈದ್ಯರು ಮತ್ತು ಸಿಬ್ಬಂದಿ ಸ್ಪಂದನೆ ಸೇರಿದಂತೆ ಮಾಹಿತಿ ಕಲೆಹಾಕಿದರು. ಸರಿಯಾದ ರೀತಿ ಚಿಕಿತ್ಸೆ ನೀಡದಿದ್ದರೆ ತಮ್ಮ ಗಮನಕ್ಕೆ ತರುವಂತೆ ಸಚಿವರು ಸಾರ್ವಜನಿಕರಿಗೆ ಸೂಚಿಸಿದರು.
ಸಚಿವರು ಗರಂ: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ರೀತಿ ಸ್ಪಂದಿಸದ ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ ಡ್ಯೂಟಿ ಡಾಕ್ಟರ್ ಕರ್ತವ್ಯಕ್ಕೆ ಆಗಮಿಸದೇ ರಾತ್ರಿ ಪಾಳಿ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಸರಿಯಾದ ಸಮಯಕ್ಕೆ ಸಿಬ್ಬಂದಿ ಆಗಮಿಸದೇ ಇದ್ದುದನ್ನು ಕಂಡು ಕೆಂಡಾಮಂಡಲವಾದರು. ಅಲ್ಲದೇ ಗರ್ಭಿಣಿಯರು, ಬಾಣಂತಿಯರು, ರೋಗಿಗಳಿಗೆ ನೀಡಬೇಕಾದ ಆಹಾರವನ್ನು ಸರ್ಕಾರದ ಮೆನು ಪ್ರಕಾರ ನೀಡದೇ ನಿರ್ಲಕ್ಷ್ಯ ತೋರುತ್ತಿರುವ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವೈದ್ಯರು ಈ ವಿಚಾರದಲ್ಲಿ ಬೇಜವಾಬ್ದಾರಿ ತೋರಿರುವುದಕ್ಕೆ ಸಿಡಿಮಿಡಿಗೊಂಡ ಸಚಿವರು, ಎಲ್ಲ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಉತ್ತಮ ಸೇವೆ ನೀಡಬೇಕು. ಹೆಚ್ಚಾಗಿ ಬಡವರೇ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ, ಅವರ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದೇ ವೈದ್ಯರು ಕಾಳಜಿ ವಹಿಸಬೇಕು. ಇತರ ಸಿಬ್ಬಂದಿ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ರೈತರ ಸಹಕಾರಿ ಕಾರ್ಖಾನೆ ನಿಯಮಿತದ ಬಾಕಿ ಬಿಲ್ 27 ಕೋಟಿ ಬಿಡುಗಡೆ: ಇದೇ ವೇಳೆ ಸುದ್ದಿಗಾರರೊಂದಿಗೆ ಸಚಿವ ತಿಮ್ಮಾಪೂರ ಮಾತನಾಡಿ, ರೈತರ ಸಹಕಾರಿ ಕಾರ್ಖಾನೆ ನಿಯಮಿತದಲ್ಲಿ 1597 ರೈತರ 27 ಕೋಟಿ ಬಾಕಿ ಬಿಲ್ ಹಣ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 16ರ ನಂತರ ರೈತರ ಖಾತೆಗೆ ಜಮಾ ಆಗಲಿದೆ. ಕಬ್ಬಿನ ಬಿಲ್ ಬಾಕಿ ಹಣ ಪಾವತಿ ಆಗಲ್ಲ ಎಂದು ರೈತರು ಆತಂಕಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ದಿನ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಈಗಾಗಲೇ ಸಂಗ್ರಹ ಇರುವ ಸಕ್ಕರೆಯನ್ನು ಮಾರಾಟ ಮಾಡಿ, ರೈತರಿಗೆ ಹಣ ನೀಡಲಾಗಿದೆ. ಕಾರ್ಖಾನೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದ್ದು, ಹಿಂದಿನ ಅಧ್ಯಕ್ಷರ ವಿರುದ್ಧ ಇದ್ದ ಅವ್ಯವಹಾರದ ಆರೋಪಗಳನ್ನು ತನಿಖೆಗೆ ಒಳಪಡಿಸಲಾಗುವುದು. ಮುಂದಿನ ದಿನಗಳಲ್ಲಿ ರೈತರ ಸಹಕಾರಿ ಕಾರ್ಖಾನೆ ನಿಯಮಿತ ಸಮಸ್ಯೆಗೆ ಸಂಬಂಧಿಸಿದಂತೆ ಸಕ್ಕರೆ ಸಚಿವರೊಂದಿಗೆ ಚರ್ಚೆ ಮಾಡಿ, ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದ ಸಚಿವರು, ಹಿಂದಿನ ಆಡಳಿತ ಮಂಡಳಿ ಮಾಡಿರುವ ಎಲ್ಲ ಕೆಲಸ ಕಾರ್ಯಗಳ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂಓದಿ: BJP Meeting: ಪಂಚ ರಾಜ್ಯಗಳ ಚುನಾವಣೆ: ಇಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ- ಮೋದಿ, ಅಮಿತ್ ಶಾ ಭಾಗಿ