ಬಾಗಲಕೋಟೆ: ಸಿ.ಎಂ. ಇಬ್ರಾಹಿಂ ಅವರನ್ನು ಬೆನ್ನು ಹತ್ತಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರು ಕರೆದುಕೊಂಡು ಬಂದು ಅವರಿಗೆ ಅವಮಾನ ಮಾಡಿದ್ದಕ್ಕೆ ಅವರು ಇಂದು ಕಣ್ಣೀರು ಹಾಕುತ್ತಿರುವುದು ನೋವಿನ ಸಂಗತಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ 75 ವರ್ಷ ದೇಶದಲ್ಲಿ ಮುಸ್ಲಿಂರನ್ನು ಮತ ಬ್ಯಾಂಕ್ಗಾಗಿ ಬಳಸಿಕೊಂಡು ಕಾಂಗ್ರೆಸ್ ಆಡಳಿತ ಮಾಡಿದೆ. ಕೇವಲ ವೋಟ್ ಬ್ಯಾಂಕ್ಗಾಗಿ ಅವರನ್ನು ಉಪಯೋಗಿಸಿಕೊಂಡು ಅಧಿಕಾರಿ ಕೊಡುವ ಸಂದರ್ಭದಲ್ಲಿ ಅನ್ಯಾಯ ಮಾಡುವುದನ್ನು ಪ್ರತಿಭಟಿಸುತ್ತಾರೆ. ಆ ಹಕ್ಕು ಅವರಿಗೆ ಎಂದರು.
ಇಬ್ರಾಹಿಂರವರು ಹಿರಿಯ ಮತ್ತು ಅನುಭವಿ ರಾಜಕಾರಣಿ. ತತ್ವ ಸಿದ್ಧಾಂತದಿಂದ ರಾಜಕಾರಣ ಮಾಡಿದವರು. ಅವರನ್ನು ಬೆನ್ನು ಹತ್ತಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸ್ ನವರು ಕರೆದುಕೊಂಡು ಬಂದು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅಖಂಡ ಜಿಲ್ಲೆಯಲ್ಲಿ ಎಸ್ ಆರ್ ಪಾಟೀಲ್ ಹಿರಿಯ ರಾಜಕಾರಣಿ, ಅನುಭವಿ. ಸಾಕಷ್ಟು ಗೌರವದಿಂದ ರಾಜಕಾರಣ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ನವರು ಟಿಕೆಟ್ ಕೊಡದೆ ಅವಮಾನ ಮಾಡಿದ್ದು, ಅವರಿಗೂ ನೋವಾಗಿದೆ. ಹೀಗಾಗಿ ಈ ಇಬ್ಬರೂ ನಾಯಕರು ಭೇಟಿ ಮಾಡಿರಬಹುದು ಎಂದು ಕಾರಜೋಳ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ
ಸಿ.ಎಂ. ಇಬ್ರಾಹಿಂರನ್ನು ಸಚಿವ ಶ್ರೀರಾಮುಲು ಬಿಜೆಪಿಗೆ ಆಹ್ವಾನಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಶ್ರೀರಾಮುಲು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾವು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡಲಿಕ್ಕೆ ಬಯಸೋದಿಲ್ಲ. ಸಮಯ ಬಂದಾಗ ಏನು ಹೇಳಬೇಕೋ ಹೇಳುತ್ತೇವೆ. ಇಬ್ರಾಹಿಂ ಮತ್ತು ನಾವು ಜನತಾ ದಳದಲ್ಲಿ ಇದ್ದವರು. ನಮ್ಮ ಜೊತೆಯಲ್ಲಿ ಆತ್ಮೀಯವಾಗಿ ಇದ್ದವರು. ಗೌರವಾನ್ವಿತ ವ್ಯಕ್ತಿ. ಅವರ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಎಂದರು.
ಇಬ್ರಾಹಿಂ ಅವರನ್ನು ಬಿಜೆಪಿಗೆ ಆಹ್ವಾನ ಮಾಡುತ್ತೀರಾ ಎಂಬ ಪ್ರಶ್ನೆಗೆ, ಬಿಜೆಪಿ ನಿಂತ ನೀರಲ್ಲ, ಹರಿಯುವ ನೀರು. ಯಾರು ಬಂದರೂ ಸ್ವಾಗತ ಮಾಡುತ್ತೇವೆ ಎಂದು ಪರೋಕ್ಷವಾಗಿ ಆಹ್ವಾನಿಸುವ ಬಗ್ಗೆ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ