ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳು ಪ್ರವಾಹಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜಿಲ್ಲೆಯ ಜಮಖಂಡಿ ತಾಲೂಕಿನ ಸೇತುವೆಗಳು ಮತ್ತು ರಸ್ತೆಗಳು ಮುಳುಗಡೆ ಹೊಂದಿರುವ ಕಾರಣ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ತಾಲೂಕಿನ ಮುತ್ತೂರು, ಕಂಕಣವಾಡಿ, ತುಬುಚಿ, ಶೂರ್ಪಾಲಿ ಗ್ರಾಮಗಳು ನಡುಗಡ್ಡೆಯಾಗಿವೆ.
ಅಲ್ಲದೆ, ಭಾಗಶಃ ಪ್ರವಾಹಕ್ಕೆ ಸಿಲುಕುವ 25 ಗ್ರಾಮಗಳಿಗೆ ಆತಂಕ ಎದುರಾಗಿದೆ. ನಡುಗಡ್ಡೆ ಪ್ರದೇಶ ಹಾಗೂ ರಸ್ತೆ ಸಂಚಾರ ಬಂದ್ ಆಗಿರುವ ಪ್ರದೇಶಗಳಿಗೆ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಉಪವಿಭಾಗಾಧಿಕಾರಿ ಇಕ್ರಮ್, ತಹಶೀಲ್ದಾರ್ ಪ್ರಶಾಂತ ಚನಗೊಂಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜಲಾವೃತಗೊಂಡ ತುಬಚಿ-ಜಂಬಗಿ ರಸ್ತೆ ಹಾಗೂ ಕಬ್ಬಿನ ಬೆಳೆಗೆ ನೀರು ನುಗ್ಗಿರುವುದನ್ನು ವೀಕ್ಷಿಸಿದರು. ತೀರ ಪ್ರದೇಶಗಳ ಮೇಲೆ ನಿಗಾ ವಹಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಪ್ಪರಗಿ ಜಲಾಶಯಕ್ಕೆ 2.28 ಲಕ್ಷ ಕ್ಯೂಸೆಕ್ ಒಳಹರಿವು ಇದೆ. 2.27 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೋಯ್ನಾದಲ್ಲಿ 124, ನವ್ಜಾ 159, ಮಹಾಬಲೇಶ್ವರದಲ್ಲಿ 215, ವಾರಣದಲ್ಲಿ 144, ರಾಧಾನಗರಿ 204, ದೂಧಗಂಗಾ 206 ಮಿಲಿಮೀಟರ್ ಮಳೆ ಸುರಿದಿದೆ.