ಬಾಗಲಕೋಟೆ: ರಾಷ್ಟ್ರಧ್ವಜ ತಯಾರಿಸುವ ಖಾದಿ ಬಟ್ಟೆಯನ್ನು ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಖಾದಿ ಗ್ರಾಮೋದ್ಯೋಗ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ನೇಕಾರರ ಬದುಕು ಮಾತ್ರ ದುಸ್ತರವಾಗಿದೆ.
ಕೊರೊನಾದಿಂದ ಇಲ್ಲಿನ ನೇಕಾರರ ಸ್ಥಿತಿ ತತ್ತರಗೊಂಡಿದೆ. ಈ ಕೇಂದ್ರದಲ್ಲಿ ತಯಾರಾಗುವ ಖಾದಿ ಬಟ್ಟೆ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಗೆ ಕಳಿಸಲಾಗುತ್ತಿತ್ತು. ಆದರೆ ಕೊರೊನಾದಿಂದ ಸೂಕ್ತ ಸೌಲಭ್ಯ ಇಲ್ಲದೆ ಬೇರೆ ಕಡೆಗೆ ಕಳಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದ ಮಹಿಳಾ ನೇಕಾರರಿಗೆ ಸೂಕ್ತ ಕೂಲಿ ಸಿಗದೆ ಪರದಾಡುವಂತಾಗಿದೆ. ಕಳೆದ ಮೂರು ತಿಂಗಳನಿಂದಲೂ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಖಾದಿ ಗ್ರಾಮೋದ್ಯೋಗ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ ಕೊರೊನಾದಿಂದ ಆರ್ಥಿಕವಾಗಿ ಹೊಡೆತ ಬಿದ್ದ ಪರಿಣಾಮ ರಾಷ್ಟ್ರ ಬಟ್ಟೆ ತಯಾರಿಕೆಗೆ ಸಂಕಟ ಬಂದೊದಗಿದೆ. ಸ್ವತಂತ್ರ್ಯಾ ನಂತರ ಖಾದಿಯನ್ನು ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ ಚಾಲನೆ ಸಿಕ್ಕಿರುವ ಇಂತಹ ಕೇಂದ್ರಗಳು ಈಗ ಮುಚ್ಚುವ ಸ್ಥಿತಿಗೆ ಬಂದಿವೆ. ಆದ್ದರಿಂದ ಸರ್ಕಾರ ಗಮನ ಹರಿಸಿ ಸೂಕ್ತ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎನ್ನುತ್ತಾರೆ ಖಾದಿ ಗ್ರಾಮೋದ್ಯೋಗ ಕೇಂದ್ರದ ವ್ಯವಸ್ಥಾಪಕ ಬಸವರಾಜ್.