ಬಾಗಲಕೋಟೆ : ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಡಳಿತದ ಅವಧಿಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಹಾಗೂ ಅವ್ಯವಹಾರ ಬಗ್ಗೆ ಹೇಗೆ ತನಿಖೆ ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಪಟ್ಟಣ ಪ್ರಾಧಿಕಾರದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಗರದ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿದೆ. ಏಜೆಂಟ್ ಹಾವಳಿ ಮಿತಿ ಮೀರಿದೆ. ಈಗ ಸ್ವಲ್ಪ ಮಟ್ಟಿಗೆ ಹತೋಟಿಗೆ ತರಲಾಗಿದೆ. ಅಲ್ಲದೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದರು.
ಯುನಿಟ್ 1 ಹಾಗೂ 2 ರಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. 150 ಕೋಟಿ ರೂ. ಹಣದಲ್ಲಿ ಯುನಿಟ್ ಒಂದರ ಅಭಿವೃದ್ಧಿ ಮಾಡಲಾಗುವುದು. ಶಿರೂರು ಗ್ರಾಮದಿಂದ ಗದ್ದನಕೇರಿ ಕ್ರಾಸ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ 25 ಕಿಮೀ ಚತುರ್ಭುಜ ರಸ್ತೆ ಮಾಡಲಾಗುತ್ತದೆ. ಈ ಬಗ್ಗೆ ವರದಿ ತಯಾರು ಮಾಡಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಶೀಘ್ರವಾಗಿ ಅನುದಾನ ಸೇರಿದಂತೆ ಇತರ ಮಾಹಿತಿ ನೀಡಲಾಗುವುದು. ಆದರೆ ಈ ರಸ್ತೆ ನಗರದ ಒಳಗಡೆ ಹೋಗದೆ, ಬೆಳಗಾವಿ- ರಾಯಚೂರ ರಸ್ತೆಯ ಮೇಲೆ ಹಾಯ್ದು ಹೋಗುತ್ತದೆ. ಈ ಬಗ್ಗೆ ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಆಲಮಟ್ಟಿ ಹಿನ್ನೀರಿನಿಂದ ಕೆರೆ ತುಂಬುವ ಯೋಜನೆಗೆ ಹತ್ತು ಕೋಟಿ ರೂ. ವೆಚ್ಚದ ಪೈಪಲೈನ್ ಹಾಕುವ ಯೋಜನೆ ಹಾಕಿಕೊಂಡಿದ್ದು, ಕೊರೊನಾದಿಂದಾಗಿ ಸರ್ಕಾರದ ಅನುದಾನ ಬರುವುದಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಿದರು.