ಬಾಗಲಕೋಟೆ: ಕೊರೊನಾ ಮೂರನೇ ಅಲೆ ಸಂಭವಿಸುವ ಹಿನ್ನೆಲೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಬಗ್ಗೆ ಸರ್ಕಾರ ಇನ್ನೂ ಚಿಂತನೆ ಮಾಡುತ್ತಿದೆ. ಆದರೆ, ಈಗಾಗಲೇ ವಿಘ್ನ ವಿನಾಶಕನ ಮೂರ್ತಿ ತಯಾರಿಸಿ ಮಾರಾಟಕ್ಕೆ ಸಜ್ಜಾಗಿರುವ ಈ ಕುಟುಂಬದ ವಿಘ್ನ ಮಾತ್ರ ದೂರಾಗುತ್ತಿಲ್ಲ.
ಬಾಗಲಕೋಟೆ ನಗರದಲ್ಲಿರುವ ಪೇಟಕರ್ ಎಂಬ ಕುಟುಂಬದವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ತಯಾರಿಕೆ ನಿಷೇಧ ಆದ ಬಳಿಕ ಬರೀ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಗಣೇಶ ಹಬ್ಬ ಮುಂಬರುವ ಹಿನ್ನೆಲೆ ಕಳೆದ ಆರು ತಿಂಗಳನಿಂದಲೇ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ಆದರೆ, ಇದುವರೆಗೆ ಇಬ್ಬರೂ ಕೂಡ ಸಾರ್ವಜನಿಕ ಪ್ರತಿಷ್ಠಾಪನೆಗಾಗಿ ವಿಗ್ರಹ ಕೊಳ್ಳಲು ಮುಂಗಡ ಹಣ ನೀಡಲು ಇವರ ಬಳಿ ಬಂದಿಲ್ಲ.
ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ ಅನುಮತಿ ಕುರಿತು ಸಿಎಂ ತೀರ್ಮಾನ ಕೈಗೊಳ್ತಾರೆ: ಸಚಿವ ಪ್ರಭು ಚೌಹಾಣ್
ಮನೆಯಲ್ಲಿ ಇಡುವ ಗಣೇಶ ಮೂರ್ತಿ ದರ 500 ರೂಪಾಯಿಯಿಂದ ಆರಂಭವಾಗುತ್ತದೆ. ಸಾರ್ವಜನಿಕವಾಗಿ ಇಡುವ ವಿಗ್ರಹಗಳ ಬೆಲೆ 5 ಸಾವಿರ ರೂಪಾಯಿಯಿಂದ ಆರಂಭವಾಗುತ್ತದೆ. ಹೀಗಾಗಿ ಸರ್ಕಾರ ಸಾರ್ವಜನಿಕ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ ಮಾತ್ರ ಇವರ ಶ್ರಮಕ್ಕೆ ಆದಾಯ ಬರುತ್ತದೆ.
ಮೂರು ವರ್ಷದ ಹಿಂದೆ ಪ್ರವಾಹದಿಂದಾಗಿ ತಯಾರಿಸಿಟ್ಟಿದ್ದ ಗಣೇಶ ಮೂರ್ತಿಗಳು ಮಾರಾಟವಾಗಿರಲಿಲ್ಲ. ಕಳೆದೆರಡು ವರ್ಷದಿಂದ ಕೋವಿಡ್ ಸಾಂಕ್ರಾಮಿಕದಿಂದಾಗಿ ವ್ಯಾಪಾರವಾಗುತ್ತಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಆದಾಯವಿಲ್ಲದೇ ಈ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ.