ಬಾಗಲಕೋಟೆ: ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರು ಮತ್ತೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶದಿಂದ ಕೋವಿಡ್-19 ವೈರಸ್ ಕುರಿತು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈಗಾಗಲೇ ಜಿಲ್ಲೆಗೆ ಕೊರೊನಾ ಲಗ್ಗೆ ಇಟ್ಟಿದ್ದು, 14 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಒಬ್ಬರನ್ನು ಬಲಿ ಪಡೆದಿದೆ. ಇದರಿಂದ ಎಚ್ಚರಗೊಂಡ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಪಂಚಾಯಿತಿ, ಪೋಲೀಸರ ಹಾಗೂ ಗ್ರಾಮಸ್ಥರ ಮಾರ್ಗದರ್ಶನದೊಂದಿಗೆ ಮಾಜಿ ಸೈನಿಕರ ಟಾಸ್ಕ್ ಫೋರ್ಸ್ ರಚಿಸಿದೆ.
ಬ್ಯಾಂಕ್ ಹಾಗೂ ಇನ್ನಿತರ ವ್ಯವಹಾರಕ್ಕಾಗಿ ಆಗಮಿಸುವ ಸಾವಳಗಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೆ ಮಾಸ್ಕ್ ಬಳಸುವಂತೆ, ಸ್ಯಾನಿಟೈಸರ್ನಿಂದ ಕೈತೊಳೆದುಕೊಳ್ಳುವಂತೆ ಅರಿವು ಮೂಡಿಸುವ ಜೊತೆಗೆ ತಾವೇ ಕಾವಲಿಗೆ ನಿಂತಿದ್ದಾರೆ.
ಹಿಂದೆ ದೇಶ ಕಾಯುತ್ತಿದ್ದೆವು. ಈಗ ಮಹಾಮಾರಿ ರೋಗ ಹರಡದಂತೆ ಗ್ರಾಮ ಕಾಯುತ್ತಿದ್ದೇವೆ. ಈ ಮೂಲಕ ದೇಶ ಸೇವೆಗೆ ಮತ್ತೊಂದು ಅವಕಾಶ ಬಂದಿದೆ ಎನ್ನುತ್ತಾರೆ ಮಾಜಿ ಸೈನಿಕರು.