ಬಾಗಲಕೋಟೆ : ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಎರಡು ದಿನದ ಬಾದಾಮಿ ಕ್ಷೇತ್ರದ ಪ್ರವಾಸದಲ್ಲಿ ಮೊದಲ ದಿನದ ಪ್ರವಾಸ ನಡೆಸಿ,ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹುಬ್ಬಳ್ಳಿಯಿಂದ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಗ್ರಾಮಕ್ಕೆ ಭೇಟಿ ನೀಡಿ ಕುರಿಗೌಡಪ್ಪನ ದೇವಾಲಯದ ಸಮುದಾಯಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಅಲ್ಲಿನ ದೇವರ ದರ್ಶನ ಪಡೆದರು.
ಬಳಿಕ ಮುತ್ತಲಗೇರಿ ಗ್ರಾಮದಿಂದ ನೇರವಾಗಿ ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಸಿದ್ದರಾಮಯ್ಯ, ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಭಾಗಿಯಾಗಿ ಕ್ಷೇತ್ರದ ಪ್ರಗತಿ ಕಾಮಗಾರಿಗಳ ಸ್ಥಿತಿಗತಿ ವಿಚಾರಿಸಿದರು. ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು. ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ಸಮಯದಲ್ಲಿ ಮಾಧ್ಯಮಗಳ ಬಗ್ಗೆ ಹಗುರವಾಗಿ ಮಾತನಾಡಿದ ಘಟನೆ ನಡೆಯಿತು. ಮಾಧ್ಯಮದವರೊಂದಿಗೆ ಮಾತನಾಡಲು ಆಪ್ತರಾದ ಹೊಳಬಸು ಶೆಟ್ಟರ್ ಸಿದ್ದರಾಮಯ್ಯ ಅವರಿಗೆ ಹೇಳಿದಾಗ, ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು,(ಮಾಧ್ಯಮ) ಅವ್ರಿಗೆ ಅಷ್ಟು ಪ್ರಾಮುಖ್ಯತೆ ಕೊಡಬಾರದಯ್ಯ,ಟಿಆರ್‌ಪಿ ನಿಮಗಲ್ವಾ...? ನನಗೆ ಪ್ರಚಾರ ಬೇಕಿಲ್ಲ, ಅದರ ಅವಶ್ಯಕತೆ ನನಗಿಲ್ಲ.
ಸುದ್ದಿ ಕೋಡೋರು ನಾವು, ಸುದ್ದಿ ಬೇಕಾದ್ರೆ ಕಾಯಬೇಕು,ಇಲ್ಲದಿದ್ರೆ ಹೋಗಬಹುದು ಎಂದು ಹೇಳಿದ್ದಾರೆ. ಅಲ್ಲಿಂದ ತೆರಳಿದ ಅವರು ಕಡರಿಗುಡ್ಡ ಗ್ರಾಮದಲ್ಲಿ ಪಶು ಇಲಾಖೆ ಕಟ್ಟಡಕ್ಕೆ ಚಾಲನೆ ನೀಡಿದರು. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರವಾದ ಬಾದಾಮಿಯ ಮೊದಲ ದಿನದ ಪ್ರವಾಸದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೆಡಿಪಿ ಸಭೆಯಲ್ಲಿ ಭಾಗಿಯಾಗಿ ಬಳಿಕ ಬಾದಾಮಿಯಲ್ಲಿಯೇ ತಂಗಿದ್ದಾರೆ.
ಓದಿ : ಮೋದಿ ಸರ್ಕಾರ ಬಂದ ಮೇಲೆ ದೇಶದ ಬಡತನ ರೇಖೆ ಶೇ.22ರಿಂದ 10ಕ್ಕೆ ಇಳಿಕೆ: ಬೊಮ್ಮಾಯಿ ಸರ್ಕಾರಕ್ಕೂ ನಡ್ಡಾ ಮೆಚ್ಚುಗೆ