ಬಾಗಲಕೋಟೆ: ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆಯ 88 ಗ್ರಾಮ ಪಂಚಾಯತಿಗಳ ಒಟ್ಟು 1,397 ಸ್ಥಾನಗಳಿಗೆ ನಾಳೆ(ಡಿ. 22) ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲೂಕಿನಲ್ಲಿ ಬರುವ ಮತಗಟ್ಟೆಗಳಿಗೆ ಇಂದು ಭೇಟಿ ನೀಡಿ ಮತದಾನದ ಸಿದ್ಧತೆ ಪರಿಶೀಲನೆ ಮಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆ ನಡೆಸಲು ಅನುಸರಿಸಬೇಕಾದ ಕ್ರಮ, ಮತಗಟ್ಟೆಯಲ್ಲಿ ಕೊಠಡಿ ಸ್ಯಾನಿಟೈಸರ್, ಮತಗಟ್ಟೆಯ 200 ಮೀಟರ್ ಅಂತರದಲ್ಲಿ ಅಭ್ಯರ್ಥಿಗಳು, ಮತದಾರರಿಗೆ ಗುರುತಿನ ಚೀಟಿ ನೀಡಲು ಸಾಮಾಜಿಕ ಅಂತರ ಕಾಯ್ದುಕೊಂಡು ಗುಂಪುಗೂಡದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆ ಅಧಿಕಾರಿಗಳು ಖಡ್ಡಾಯವಾಗಿ ಫೇಸ್ ಮಾಸ್ಕ್ ಮತ್ತು ಹ್ಯಾಂಡ್‍ಗ್ಲೌಸ್ ಧರಿಸಬೇಕು. ಮತದಾರರು ಮತ ಚಲಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳ ಜಿಲ್ಲಾ ವೀಕ್ಷಕರಾದ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಮೊದಲ ಹಂತದ ಗ್ರಾಪಂ ಚುನಾವಣೆಗೆ ನಾಳೆ ಮತದಾನ: ಕಣದಲ್ಲಿ 1,17,383 ಅಭ್ಯರ್ಥಿಗಳು
ಜಮಖಂಡಿ ಉಪ ವಿಭಾಗದ 89 ಗ್ರಾಮ ಪಂಚಾಯತಿಗಳ 1592 ಸ್ಥಾನಗಳ ಪೈಕಿ 154 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದರೆ, 41 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. 88 ಗ್ರಾಪಂಗಳ ಒಟ್ಟು 1,397 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ 720 ಪ್ರಿಸೆಂಡಿಗ್ ಅಧಿಕಾರಿ, 720 ಸಹಾಯಕ ಪ್ರಿಸೆಂಡಿಂಗ್ ಅಧಿಕಾರಿ ಹಾಗೂ 1440 ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 2880 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದಿರೋದು ಸಾರಾಯಿ, ಬಾರ್ ಓಪನ್ ಮಾಡೊದಿಕ್ಕಲ್ಲ- ಡಿಸಿಎಂ ಕಾರಜೋಳ