ಬಾಗಲಕೋಟೆ: ಮುಧೋಳದಲ್ಲಿ ನೆರೆ ಪರಿಹಾರ ತಾರತಮ್ಯ ವಿಚಾರವಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನೆ ಮುಂದೆ ಧರಣಿ ಕೂರಲು ಹೊರಟಿದ್ದ ರೈತರನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದ್ದು, ರಾತ್ರಿಯಾದರೂ ಕೂಡ ಪೊಲೀಸ್ ಠಾಣೆಯಲ್ಲೇ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆ ಕಡೆಗೆ ಹೊರಟಿದ್ದ ರೈತ ಮುಖಂಡ ಯಲ್ಲಪ್ಪ ಹೆಗಡೆ ಸೇರಿದಂತೆ ಇತರ ರೈತರನ್ನು ತಡೆ ಹಿಡಿದ ಪೊಲೀಸರು, ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಡಿಸಿಎಂ ಕ್ಷೇತ್ರದಲ್ಲಿ ಹೋರಾಟಗಾರರನ್ನು ಹತ್ತಿಕ್ಕುವ ತಂತ್ರ ನಡೆಯುತ್ತಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಧನಕ್ಕೊಳಗಾಗುವ ಮುನ್ನ ಮುಧೋಳ ಐಬಿ ಎದುರು ರೈತರು ಧರಣಿ ನಡೆಸುತ್ತಿದ್ದರು. ಐಬಿ ಮುಂದೆ ಅಹವಾಲು ಸಲ್ಲಿಸುತ್ತಿರುವ ವೇಳೆ ಡಿಸಿಎಂ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತುಕತೆ ಫಲಪ್ರದವಾಗಲಿಲ್ಲ. ಹೀಗಾಗಿ ಡಿಸಿಎಂ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅವರ ಮನೆ ಕಡೆಗೆ ಹೊರಟಿದ್ದರು ಎನ್ನಲಾಗಿದೆ.