ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಪ್ರವಾಹ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ 12,500 ನಗದು ಹಾಗೂ 3 ಮೊಬೈಲ್ ಫೋನ್ಗಳನ್ನ ದೋಚಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, ಐಟಿ ಅಧಿಕಾರಿಗಳು ಎಂದು ಸುಳ್ಳು ಹೇಳಿ ಹಣ ದೋಚಿಕೊಂಡು ಹೋಗಿದ್ದಾರೆ. ಲಕ್ಷ್ಮಣ ಅಲಗೂರು ಎಂಬ ಅಟೋ ಚಾಲಕನಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ. ಡಿಸೆಂಬರ್ 23ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ GA-07 Gc- 8275 ನಂಬರಿನ ಎರ್ಟಿಗಾ ಕಾರಿನಲ್ಲಿ ಬಂದ ಖದೀಮರು ತಾವು ಐಟಿ ಅಧಿಕಾರಿಗಳೆಂದು ವಂಚನೆ ಮಾಡಿದ್ದಾರೆ. ಮನೆಯಲ್ಲಿನ ಹಾಸುಕಲ್ಲು, ಬ್ಯಾಗ್, ಪೆಟ್ಟಿಗೆ ಕಿತ್ತು ಜಾಲಾಡಿ ಹುಡುಕಿದ್ದಾರೆ. ಇನ್ನು ಓರ್ವ ಮಹಿಳೆ ಸೇರಿದಂತೆ ಏಳು ಜನರು ಬಂದಿದ್ದರು ಎನ್ನಲಾಗಿದೆ.
![fake](https://etvbharatimages.akamaized.net/etvbharat/prod-images/5589105_bgk.jpg)
ಲಕ್ಷ್ಮಣ ಅಲಗೂರ ಮನೆಗೆ ಪ್ರವಾಹ ಸಮಯದಲ್ಲಿ ಕೋಟಿ ಕೋಟಿ ಹಣದ ಗಂಟು ನೀರಿನಲ್ಲಿ ಹರಿದು ಬಂದಿದೆ ಎಂದು ಸುದ್ದಿ ಹಬ್ಬಿದ ಹಿನ್ನೆಲೆ ಈ ಸುದ್ದಿ ತಿಳಿದು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಗಾವಿಗೆ ಬಂದು ಭೇಟಿಯಾಗಿ ಎಂದು ಬೆಳಗಾವಿ ತೆರಿಗೆ ಇಲಾಖೆ ವಿಳಾಸ ಕೊಟ್ಟು ಹೋದ ಹಿನ್ನೆಲೆ ಲಕ್ಷ್ಮಣ ಅಲಗೂರ ಬೆಳಗಾವಿಗೆ ಹೋದಾಗ ಮೋಸ ಹೋದ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ನಡೆಸಲಾಗುತ್ತಿದೆ.