ಬಾಗಲಕೋಟೆ: ಪ್ರಮುಖ ಧಾರ್ಮಿಕ ಶಕ್ತಿ ಪೀಠವಾಗಿರುವ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಬನದ ಹುಣ್ಣಿಮೆ ದಿನದಂದು ಸರಳ ಉತ್ಸವ ನಡೆಯಲಿದೆ. ಈ ಹಿನ್ನೆಲೆ ನಿನ್ನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಕೊರೊನಾ ಹಿನ್ನೆಲೆ ಜಿಲ್ಲಾಡಳಿತ ಜಾತ್ರೆಯನ್ನು ನಿಷೇಧ ಮಾಡಿರುವ ಹಿನ್ನಲೆ ಜನವರಿ 30ವರೆಗೆ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಆದರೆ, ಅರ್ಚಕರಿಂದ ಪ್ರತಿ ನಿತ್ಯ ಪೂಜೆ, ಪುರಸ್ಕಾರ ಹೋಮ ಹವನ ನಡೆಯಲಿದೆ.
ಜನವರಿ 20ರ ಬುಧವಾರದಂದು ಪೌಷ್ಯಶುದ್ದ ಅಷ್ಟಮಿ ಎಂದು ನವರಾತ್ರಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಮುಂದಿನ ಬುಧವಾರ ಜನವರಿ 27 ರಂದು ಪಲ್ಲೆದ ಹಬ್ಬ ಎಂದು ವಿಶೇಷ ಪೂಜೆ ಮಾಡಲಾಗುತ್ತದೆ. ಅಂದರೆ, ಬನಶಂಕರಿ ದೇವಿಗೆ ಶಾಖಾಂಬರಿ ಎಂದು ಇನ್ನೊಂದು ಹೆಸರಿನಿಂದ ಕರೆಯಲಾಗುತ್ತದೆ. ಸಸ್ಯಹಾರಿ ಪ್ರಿಯ ಈ ದೇವತೆಗೆ ಬಗೆ ಬಗೆಯ ಸಸ್ಯಾಹಾರದಿಂದ ಮಾರ್ಲಾಪಣೆ ಮಾಡಿ ದೇವಿಗೆ ಅಲಂಕಾರ ಮಾಡಲಾಗುತ್ತದೆ.
ಜನವರಿ 28 ರಂದು ಹುಣ್ಣಿಮೆ ನಿಮಿತ್ತ ನವಚಂಡಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧ ಇರುವುದರಿಂದ ಅರ್ಚಕರು, ಜಾತ್ರಾ ಮಹೋತ್ಸವದ ನಿಮಿತ್ತ ನಿತ್ಯ ಬೆಳ್ಳಿಗ್ಗೆ ಏಕಾದಶಿ ಆವರ್ತ, ಕ್ಷೀರಾಭಿಷೇಕ,ರುದ್ರಾಭಿಷೇಕ, ಮಹಾ ಪೂಜಾ ಹೀಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ.
ಲೋಕ ಕಲ್ಯಾಣಕ್ಕಾಗಿ ಹಾಗೂ ಕೊರೊನಾ ಮಹಾಮಾರಿ ಹೋಗಲಾಡಿಸುವ ಉದ್ದೇಶ ದಿಂದ ನಿತ್ಯ ಪೂಜೆ ಪುರಸ್ಕಾರ ಮಾಡಲಾಗುತ್ತದೆ. ಆದರೆ, ಜಿಲ್ಲಾಡಳಿತ ವತಿಯಿಂದ ರಥೋತ್ಸವ ಕಾರ್ಯಕ್ರಮ ನಡೆಯುವ ಬಗ್ಗೆ ಇನ್ನು ಯಾವುದೇ ಮಾಹಿತಿ ದೊರೆತಿಲ್ಲ. ರಥೋತ್ಸವ ಇಲ್ಲವಾದರೂ, ದೇವಿಯ ಪಲ್ಲಕ್ಕಿ ಉತ್ಸವ ನಡೆಸಲಾಗುವುದು ಎಂದು ಅರ್ಚಕರಾದ ಸಾಗರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.