ಬಾಗಲಕೋಟೆ: ಜಿಲ್ಲೆಯ ಕಮತಗಿ ಗ್ರಾಮದಲ್ಲಿ ಜಾನಪದ ಅಕಾಡೆಮಿ ವತಿಯಿಂದ ಸಂಗೀತಗಾರರು, ಕಲಾವಿದರು ಹಾಗೂ ಪತ್ರಕರ್ತರ ಮಕ್ಕಳ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಸ್ಥಳೀಯ ಹುಚ್ಚೇಶ್ವರ ಮಠದ ಸ್ವಾಮೀಜಿಗಳು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರ್ಶೀವಚನ ನೀಡಿದ ಶ್ರೀಗಳು, ಕಲಾವಿದರ, ಸಂಗೀತಗಾರರ ಹಾಗೂ ಪತ್ರಕರ್ತರ ಮಕ್ಕಳು ಬಡತನದಲ್ಲಿ ಸಾಧನೆ ಮಾಡಿರುತ್ತಾರೆ. ಆದರೆ, ಅವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿರುವುದಿಲ್ಲ. ಜಾನಪದ ಅಕಾಡೆಮಿ ವತಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದರು.
ಇದೇ ಸಮಯದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹೇಶ ಅಂಗಡಿ ಮಾತನಾಡಿ, ಕೇವಲ ಕಲಾವಿದರ ಮಕ್ಕಳಲ್ಲದೇ ಪತ್ರಕರ್ತರ ಮಕ್ಕಳೂ ಸಹ ಬಡತನದಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ. ಅವರಿಗೂ ಸಹ ಅಕಾಡೆಮಿ ವತಿಯಿಂದ ಪ್ರೋತ್ಸಾಹ ನೀಡುವುದು ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಅಕಾಡೆಮಿಯವರಿಗೆ ಮಾಹಿತಿ ನೀಡಿ ಈ ಬಾರಿ ಪತ್ರಕರ್ತರ ಮಕ್ಕಳಿಗೆ ಸನ್ಮಾನ ಹಮ್ಮಿಕೊಂಡಿದ್ದು ಯೋಗ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಗೋನಾಳ, ತಾಲೂಕು ಅಧ್ಯಕ್ಷರಾದ ನರಸಿಂಹಮೂರ್ತಿ, ವಲಯದ ಅಧ್ಯಕ್ಷರಾದ ಪ್ರಕಾಶ ಗುಳೇದಗುಡ್ಡ ಸೇರಿ ಇತರ ಮುಖಂಡರು ಭಾಗವಹಿಸಿದ್ದರು.