ಬಾಗಲಕೋಟೆ: ಕೊರೊನಾ ಸೋಂಕು ಹರಡುವುದು ಕಡಿಮೆಯಾಗಿದ್ದರೂ ಸೋಂಕಿನಿಂದ ಮೃತಪಟ್ಟ ಕುಟುಂಬದವರ ರೋದನೆ ಮಾತ್ರ ಇನ್ನೂ ನಿಂತಿಲ್ಲ. 15 ದಿನಗಳ ಅಂತರದಲ್ಲಿ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ ಒಂದೇ ಕುಟುಂಬದ ಸಂಬಂಧಿಗಳಲ್ಲಿ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಶಿರಹಟ್ಟಿ ಹಾಗೂ ಪಡನಡಿ ಸಂಬಂಧಿಗಳಲ್ಲಿ ಬಾಳಪ್ಪ ಶಿರಹಟ್ಟಿ (89), ಸುಮಿತ್ರಾ ಭೂಪಾಲ ಶಿರಹಟ್ಟಿ(61), ಕಾಶವ್ವ ಶ್ರೀಪಾಲ ಪಡನಡಿ (42) ಹಾಗೂ ಶೋಭಾ ಅಲ್ಲಪ್ಪ ಪಡನಡಿ ಮೃತರು. ಇವರೆಲ್ಲರೂ ಒಂದೇ ಕುಟುಂಬದ ಸಂಬಂಧಿಗಳಾಗಿದ್ದು, 15 ದಿನಗಳಲ್ಲಿ ನಾಲ್ವರ ಸಾವಿನಿಂದ ಉಳಿದ ಸದಸ್ಯರು ಆತಂಕಗೊಂಡಿದ್ದಾರೆ.
ಕೊರೊನಾ 2ನೇ ಅಲೆಯಿಂದ ಬಹಳಷ್ಟು ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ. ಮದುವೆ, ಮಕ್ಕಳೊಂದಿಗೆ ಸುಂದರ ಬದುಕು ನಡೆಸುತ್ತಿದ್ದವರ ಬಾಳಿಗೆ ಈ ಮಹಾಮಾರಿ ಕೊಳ್ಳಿಯಿಡುತ್ತಿದೆ. ವಾರದ ಹಿಂದೆ ನೆಮ್ಮದಿಯ ಬದುಕು ನಡೆಸುತ್ತಿದ್ದವರ ಕುಟುಂಬವೀಗ ಸಂಕಷ್ಟಕ್ಕೆ ಒಳಗಾಗಿದೆ. ಕುಟುಂಬಸ್ಥರನ್ನು ಕಳೆದುಕೊಂಡವರ ಮನೆಯಲ್ಲಿ ನೀರವ ಮೌನ ಆವರಿಸಿದೆ.