ಬಾಗಲಕೋಟೆ: ಮುಧೋಳ ಠಾಣೆಯ ಪೇದೆಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಡಿಸಿಎಂ ಗೋವಿಂದ ಕಾರಜೋಳಗೂ ಕೊರೊನಾ ಭೀತಿ ಉಂಟಾಗಿತ್ತು.
ಕೊರೊನಾ ಪಾಸಿಟಿವ್ ಬಂದಿರುವ ಪೇದೆ ಮುಧೋಳ ಸಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುಧೋಳ ಠಾಣೆಯ ಸಿಪಿಐ ಸೇರಿದಂತೆ 8 ಜನರನ್ನು ಬಾಗಲಕೋಟೆ ಲಾಡ್ಜ್ವೊಂದರಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇನ್ನು ಕ್ವಾರಂಟೈನ್ನಲ್ಲಿರುವ ಮುಧೋಳ ಸಿಪಿಐ, ಪಿಎಸ್ಐ ಹಾಗೂ ಇತರ ಪೇದೆಗಳು ಮಾರ್ಚ್ 28, 30 ಹಾಗೂ ಎಪ್ರಿಲ್ 4,7, 11ರಂದು ಮುಧೋಳ, ಬಾಗಲಕೋಟೆಯಲ್ಲಿ ಕೋವಿಡ್ ಸಭೆ ಹಾಗೂ ಪ್ರವಾಸ ಕೈಗೊಂಡಿದ್ದ ಡಿಸಿಎಮ್ ಗೋವಿಂದ ಕಾರಜೋಳ ಅವರಿಗೆ ಭದ್ರತೆ ಒದಗಿಸಿದ್ದರು. ಮಾರ್ಚ್ 28ರಂದು ಮುಧೋಳ ನಗರದಲ್ಲಿ ಕಾರಜೋಳ ಕೈಗೊಂಡಿದ್ದ ಕೊರೊನಾ ಜಾಗೃತಿಯಲ್ಲೂ ಪೊಲೀಸರು ಭದ್ರತೆ ನೀಡಿದ್ದರು.
ಜೊತೆಗೆ ಡಿಸಿಎಮ್ ಗೋವಿಂದ ಕಾರಜೋಳ ಪ್ರತೀ ಬಾರಿ ಮುಧೋಳಗೆ ಬಂದಾಗಲೂ ಸಿಪಿಐ, ಪಿಎಸ್ಐ, ಪೇದೆಗಳಿಂದ ಭದ್ರತೆ ನೀಡಲಾಗಿತ್ತು. ಹೀಗಾಗಿ ಈ ವೇಳೆ ಕಾರಜೋಳ ಅವರ ಸಂಪರ್ಕ ಹೊಂದಿರುವ ಶಂಕೆ ಇರುವ ಕಾರಣ ಡಿಸಿಎಮ್ ಗೋವಿಂದ ಕಾರಜೋಳಗೂ ಕ್ವಾರಂಟೈನ್ ಅವಶ್ಯಕತೆ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಈಟಿವಿ ಭಾರತಗೆ ಮಾಹಿತಿ ನೀಡಿದ್ದು, ಸೋಂಕಿತ ಪೇದೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಹೀಗಾಗಿ ಡಿಸಿಎಂ ಅವರಿಗೆ ಕ್ವಾರೆಂಟೈನ್ ಇಡುವುದು ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.