ಬಾಗಲಕೋಟೆ: ನಿಧಿಯಲ್ಲಿ ಸಿಕ್ಕಿರುವ ಬಂಗಾರ ಇದು ಎಂದು ಸುಳ್ಳು ಹೇಳಿ ನಕಲಿ ಬಂಗಾರ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪಿಯನ್ನು ಮುಧೋಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿಲಕನಟ್ಟಿ ಗ್ರಾಮದ ಕೆ. ಪರಶುರಾಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಮಹಾಂತೇಶ ಸುಣಗಾರ ಎಂಬವರು ಆನ್ಲೈನ್ನಲ್ಲಿ ಮುಧೋಳ ಶ್ವಾನ ಮಾರಾಟ ಮಾಡುವ ಬಗ್ಗೆ ಪ್ರಚಾರ ಮಾಡಿ, ಪೋನ್ ನಂಬರ್ ನೀಡಿದ್ದರು. ಇದೇ ನಂಬರ್ ಮೂಲಕ ಮಾತನಾಡುತ್ತಾ, ಮುಧೋಳ ಶ್ವಾನ ಬಗ್ಗೆ ಮಾಹಿತಿ ಪಡೆಯುತ್ತಾ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಿಧಿಯಲ್ಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿದ ಆರೋಪಿ17 ಲಕ್ಷ ರೂ ಕೂಟ್ಟರೆ ಬಂಗಾರದ ನಾಣ್ಯಗಳನ್ನು ಕೊಡುತ್ತೇವೆ ಎಂದು ತಿಳಿಸಿದ್ದಾನೆ.
ಕೊನೆಗೆ 2.5 ಲಕ್ಷ ಕೊಡುವುದಾಗಿ ವ್ಯವಹಾರ ಆಗಿದೆ. ನಕಲಿ ಇರುವ ಬಂಗಾರದ ನಾಣ್ಯಗಳನ್ನು ಪ್ಲಾಸ್ಟಿಕ್ ಬ್ಯಾಗ್ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಹಣ ಪಡೆದುಕೊಂಡು ಕೈ ಕೊಟ್ಟಿದ್ದಾನೆ. ಮನೆಗೆ ಬಂದು ನೋಡಿದಾಗ ನಕಲಿ ಎಂದು ತಿಳಿದು, ಮಹಾಂತೇಶ ಸುಣಗಾರ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಜಾಡು ಹಿಡಿದ ಪೊಲೀಸರು ಕೆ. ಪರಶುರಾಮ ಎಂಬುವ ಆರೋಪಿಯನ್ನು ಬಂಧಿಸಿ, 2 ಲಕ್ಷ ಐದು ಸಾವಿರ ರೂ. ಹಣ ಹಾಗೂ ನಕಲಿ ಬಂಗಾರ ಇರುವ 205 ನ್ಯಾಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.