ಬಾಗಲಕೋಟೆ: ಬಡ ರೋಗಿಗಳಿಗೆ ಅನುಕೂಲವಾಗಲೆಂದು ಜಿಲ್ಲಾಸ್ಪತ್ರೆಯಲ್ಲಿ ಜೂನ್ 2018 ರಿಂದ ಆರಂಭಗೊಂಡಿರುವ ಸಿಟಿ ಸ್ಕ್ಯಾನ್ ಸೆಂಟರ್ನಿಂದ ಈವರೆಗೆ ಸುಮಾರು 5,600 ರೋಗಿಗಳಿಗೆ ತಪಾಸಣೆ ಮಾಡಲಾಗಿದೆ.
ಖಾಸಗಿ ಆಸ್ಪತ್ರೆಗಳ ನಗರವೆಂದೇ ಖ್ಯಾತಿಗೊಳಪಟ್ಟಿರುವ ನಗರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಅನ್ನು ಉಚಿತವಾಗಿ ಮಾಡುತ್ತಿರುವುದು ಸಾಕಷ್ಟು ಅನುಕೂಲವಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆಯಡಿ ಪಿಪಿಪಿ (ಖಾಸಗಿ-ಸಾರ್ವಜನಿಕ ಸಹಭಾಗಿತ್ವ) ಯಡಿಯಲ್ಲಿ ಪುಣೆಯ ಕೃಷ್ಣಾ ಡೈಗ್ನೋಸ್ಟಿಕ್ ಸಂಸ್ಥೆಯು ಆರಂಭಿಸಿರುವ ಈ ಕಾರ್ಯಕ್ರಮದಡಿ ಬಾಗಲಕೋಟೆ ಸೇರಿದಂತೆ ವಿಜಯಪುರ, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಪ್ರತಿದಿನ ನೂರಾರು ರೋಗಿಗಳು ಇದರ ಉಚಿತ ಸೇವೆ ಪಡೆಯುತ್ತಿದ್ದಾರೆ. ದೇಹದ ಪ್ರತಿ ಅಂಗಾಂಗಗಳನ್ನು ಪರೀಕ್ಷಿಸಿ ನ್ಯೂನ್ಯತೆಗಳನ್ನು ತಕ್ಷಣವೇ ಕಂಡು ಹಿಡಿಯುವ ಸಿಟಿ ಸ್ಕ್ಯಾನ್ ದಿನದ 24 ಗಮಟೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಜಿಲ್ಲಾಸ್ಪತ್ರೆಯ ವೈದ್ಯರ ಶಿಫಾರಸಿನ ಮೇರೆಗೆ ದಿನನಿತ್ಯ 25 ರಿಂದ 30 ರೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ತುರ್ತು ಚಿಕಿತ್ಸಾ ರೋಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಇದರಿಂದ ಸಾಕಷ್ಟು ಅನುಕೂಲಗಳಾಗುತ್ತಿರುವ ಬಗ್ಗೆ ಘಟಕದ ತಂತ್ರಜ್ಞಾರಾದ ಅಜಿತ ಶೇಟಫಾಳಕರ್ ಜೈನ್ ತಿಳಿಸಿದರು.
ಸದ್ಯ ಒಟ್ಟು 5 ಜನರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಪಘಾತ ಸಂಬಂಧಿತ ರೋಗಿಗಳಿಗೆ ತಕ್ಷಣವೇ ಸ್ಪಂದಿಸಲಾಗುತ್ತದೆ. ದೂರದ ಮುಧೋಳ, ಜಮಖಂಡಿ ಸುತ್ತಲಿನ ಬಡರೋಗಿಗಳೂ ಸಹ ದಿನನಿತ್ಯ ಬರುತ್ತಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಮಾಡಲು ಸಿಟಿ ಸ್ಕ್ಯಾನ್‍ಗೆ ಕನಿಷ್ಠ 3-4 ಸಾವಿರ ರೂಪಾಯಿ ಖರ್ಚಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಈ ಸೇವೆ ದೊರೆಯುತ್ತಿರುವುದರಿಂದ ಬಡ ಜನರಿಗೆ ವರದಾನವಾಗಿದೆ.