ಬಾಗಲಕೋಟೆ: ಲಕ್ಕಿ ಡ್ರಾ ಹೆಸರಿನಲ್ಲಿ 10 ಕ್ಕೂ ಹೆಚ್ಚು ಹಳ್ಳಿಗಳ ಅಮಾಯಕ ಜನರಿಂದ ಅಂದಾಜು 20 ಲಕ್ಷ ರೂಪಾಯಿ ಹಣ ಪಡೆದು ಮೋಸ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ತಾಲೂಕಿನ ಸಿಗಿಕೇರಿ, ಕದಂಪುರ, ನೀರಲಕೇರಿ, ಬದಾಮಿ ತಾಲೂಕಿನ ಸುಳಿಕೇರಿ ಹಾಗೂ ಹುನಗುಂದ ತಾಲೂಕಿನ ಹಿರೇಮಾಗಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿ ಜನರಿಗೆ ವಂಚಕರ ಜಾಲ ಮೋಸವೆಸಗಿ ಎಸ್ಕೇಪ್ ಆಗಿದೆ. ಒಬ್ಬೊಬ್ಬರಿಂದ ಎಂಟುನೂರು ರೂ. ಹಣ ಪಡೆದು ಜಿಎಸ್ಎಸ್ ಎಂಟರ್ ಪ್ರೈಸಸ್ ಹೆಸರಲ್ಲಿ ಮೋಸ ಮಾಡಲಾಗಿದೆ. ಬೈಕ್ ಲ್ಯಾಪ್‌ಟಾಪ್, ಟಿವಿ, ಫ್ರಿಡ್ಜ್, ಮೊಬೈಲ್, ಜ್ಯುವೆಲ್ಲರಿ, ಫರ್ನೀಚರ್, ಫ್ಯಾನ್ ಗಳನ್ನು ಲಕ್ಕಿ ಡ್ರಾ ಮೂಲಕ ಕೊಡುವ ಆಮಿಷ ಒಡ್ಡಲಾಗಿತ್ತು.
ಫೆಬ್ರವರಿ 21 ರಂದು ಡ್ರಾ ಮಾಡೋದಾಗಿ ಹೇಳಿ ತಂಡ ನಾಪತ್ತೆ ಆಗಿದೆ ಎಂದು ತಿಳಿದು ಬಂದಿದೆ. ಸಚಿನ್ ದೊಡ್ಡಮನಿ ಹಾಗೂ ತಂಡದಿಂದ ಮೋಸ ಆಗಿದೆ ಎನ್ನಲಾಗಿದ್ದು, ಈ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲೂ ಮೋಸ ಹೋದ ಗ್ರಾಮಸ್ಥರು ದೂರು ಕೊಟ್ಟಿದ್ದಾರೆ.