ಬಾಗಲಕೋಟೆ: ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಮಾಚಾರ ಮಾಡಿರುವ ಘಟನೆ ಇಳಕಲ್ ತಾಲೂಕಿನ ಗೋನಾಳ ಎಸ್ಬಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಮಕ್ಕಳು, ಗ್ರಾಮಸ್ಥರು ಭಯಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗೇಟ್ ಎದುರು ಎರಡು ಗೊಂಬೆ ಇರಿಸಿ, ಕುಂಕುಮ ಎರಚಿ, ನಿಂಬೆ ಹಣ್ಣುಗಳನ್ನಿಟ್ಟು ವಾಮಾಚಾರ ಮಾಡಲಾಗಿದೆ. ಈ ಬಗ್ಗೆ ಬೆಳಗಿನ ಜಾವ ಗ್ರಾಮದ ಜನತೆ ನೋಡಿ ಆತಂಕ ವ್ಯಕ್ತಪಡಿಸಿ, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದಿದ್ದಾರೆ.
ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿಕೊಂಡು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಶಾಲೆಗೆ ವಾಮಾಚಾರ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರ ಮೇಲೆಯೋ ಅಥವಾ ಮಕ್ಕಳ ಮೇಲೆ ಈ ರೀತಿ ವಾಮಾಚಾರ ನಡೆಸಿರಬಹುದೇ ಎಂಬುದರ ಕುರಿತು ಸ್ಥಳೀಯರು ಪ್ರಶ್ನಿಸಿದ್ದಾರೆ. ಇದರಿಂದ ಪಾಲಕರು, ಮಕ್ಕಳನ್ನ ಶಾಲೆಗೆ ಕಳಿಸಲು ಹಿಂದೇಟು ಹಾಕಿದ್ದಾರೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಶಾಲೆಯ ಸುತ್ತಮುತ್ತ ನಡೆಯುತ್ತಿದ್ದ ವಾಮಾಚಾರ, ಇಂದು ಶಾಲೆಯ ಗೇಟ್ಗೆ ಮಾಡಿದ್ದರಿಂದ ಮತ್ತಷ್ಟು ಆತಂಕ ಮೂಡಿಸಿದೆ. ವಾಮಾಚಾರ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯವ ಹಂತದಲ್ಲಿ ಇದ್ದಾಗ ಈ ರೀತಿ ವಾಮಚಾರ ಮಾಡಿರುವುದು ಏಕೆ? ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಮಾತ್ರ ವಿಷಯ ಬಹಿರಂಗವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಓದಿ: ಸಿಎಂ ನಿವಾಸಕ್ಕೆ ಸ್ಕೃತಿ ಇರಾನಿ ಭೇಟಿ: ಡ್ಯಾಶ್ ಬೋರ್ಡ್ ಕುರಿತು ಚರ್ಚೆ