ಬಾಗಲಕೋಟೆ: ಚುನಾವಣೆಗೂ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾ ಈಗಾಗಲೇ ಸೀಟ್ ಬುಕ್ ಮಾಡುತ್ತಿದ್ದಾರೆ. ಇಂತಹ ನಾಯಕರು ಜನತೆಯಲ್ಲಿ ಹೇಗೆ ಮತ ಕೇಳುತ್ತಿದ್ದಾರೆ? ಎಂದು ಬಿಜೆಪಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಪ್ರಮುಖವಾಗಿದೆ. ಹೀಗಾಗಿ ಅವರ ಹೆಸರಿನಲ್ಲಿ ಮತ ಕೇಳಲು ಹೋಗುತ್ತಿದ್ದೇವೆ ಎಂದರು.
ಅಭ್ಯರ್ಥಿ ಹೆಸರು ಹೇಳದೆಯೇ ಮೋದಿ ಅವರು ಪ್ರಚಾರ ಭಾಷಣ ಮಾಡುತ್ತಾರಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕ್ಷೇತ್ರದಲ್ಲಿ ಪಿ.ಸಿ.ಗದ್ದಿಗೌಡರ ಮೂರು ಅವಧಿಗೆ ಸಂಸದರಾಗಿ ಆಯ್ಕೆ ಕೆಲಸ ಮಾಡಿದ್ದಾರೆ. ಅವರ ಹೆಸರು ಎಲ್ಲರಿಗೂ ತಿಳಿದಿದೆ. ಆದರೆ ಇಡೀ ದೇಶದ ಅಭಿವೃದ್ಧಿಗೆ ಮೋದಿಯವರ ಪಾತ್ರ ಇರುವುದರಿಂದ ಅವರ ಹೆಸರನಲ್ಲಿ ಹೋಗುವ ಮೂಲಕ ದೇಶದಲ್ಲಿ ಬದಲಾವಣೆ ಸಾಧ್ಯ ಎಂದರು.
ಈ ಭಾರಿ ರಾಜ್ಯದ 22 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.