ಬಾಗಲಕೋಟೆ: ಜಿಲ್ಲಾಡಳಿತ ಭವನದ ಎದುರು ಮುಸ್ಲಿಂ ಹಾಗೂ ದಲಿತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಂದೂವರೆ ದಶಕದ ಬಳಿಕ ಸಾರ್ವಜನಿಕವಾಗಿ ಬ್ಲೇಡ್ ಬಾಬಾ(ಅಸ್ಲಾಂಬಾಬಾ ಶಹಪುರಕರ) ಕಾಣಿಸಿಕೊಂಡಿದ್ದಾನೆ. ಸಿಎಎ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಪ್ರವೇಶ ದ್ವಾರದ ಬಳಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಪ್ರಾರಂಭಿಸಿಲಾಗಿದೆ. ಈ ಪ್ರತಿಭಟನಾ ಸ್ಥಳದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷನಾಗಿದ್ದಾನೆ.
ಯಾರೀತ? :
ಸುಮಾರು ಹದಿನೈದು ವರ್ಷಗಳ ಹಿಂದೆ ವೈದ್ಯಲೋಕಕ್ಕೆ ಸೆಡ್ಡು ಹೊಡೆದು, ಬ್ಲೇಡ್ನಿಂದ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂದು ಖ್ಯಾತಿ ಪಡೆದುಕೊಂಡಿದ್ದ. ಈ ಬಗ್ಗೆ ಬಾಗಲಕೋಟೆಯಲ್ಲಿ ದೊಡ್ಡಮಟ್ಟದ ಹೋರಾಟ ನಡೆದಿತ್ತು.
2004 ರಲ್ಲಿ ವೈದ್ಯಕೀಯ ವಿಭಾಗ ಹಾಗೂ ವಿವಿಧ ಸಂಘಟನೆಗಳಿಂದ ಬಹಿರಂಗ ಸವಾಲು ಹಾಕಿದ ಹಿನ್ನೆಲೆ ಸವಾಲ್ಗೆ ಬೆದರಿ ಕಣ್ಮರೆ ಆಗಿದ್ದ ಬ್ಲೇಡ್ ಬಾಬಾ ಈಗ ಪ್ರತ್ಯಕ್ಷ ಆಗಿದ್ದಾನೆ. ಇನ್ನು ಹಳೇ ಎಪಿಎಂಸಿಯಲ್ಲಿ ಬಾಬಾನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅಸ್ಲಂನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ದೆಹಲಿ, ಮುಂಬೈ, ಬೆಂಗಳೂರಲ್ಲಿ ಹಾಗೂ ಸೊಲ್ಲಾಪುರದಲ್ಲಿ ಇದ್ದಾನೆ ಅಂತ ಹೇಳಲಾಗುತ್ತಿತ್ತು. ಆಗಾಗ ಬಾಗಲಕೋಟೆಗೆ ಕದ್ದು ಮುಚ್ಚಿ ಬಂದು ಹೋಗ್ತಾನೆ ಅಂತ ಗುಮಾನಿ ಇತ್ತು. ಇದೆಲ್ಲಕ್ಕೂ ಇಂಬು ನೀಡುವಂತೆ ಈಗ ಕೆಲ ತಿಂಗಳಿಂದ ಬಾಗಲಕೋಟೆಯಲ್ಲೆ ಇದ್ದಾನೆ. ಸೋಮವಾರ ದಿಢೀರನೆ ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಇಳಿದಿದ್ದಾನೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾನೆ.
ಕಾನೂನು ಬಾಹಿರವಾಗಿ ನಾನು ಚಟುವಟಿಕೆ ಮಾಡಿದ್ರೆ ಕ್ರಮ ಜರುಗಿಸಲಿ. ಸದ್ಯ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಬಾಗಲಕೋಟೆಯಲ್ಲಿ ಇದ್ದೇನೆ, ನನ್ನ ಮಕ್ಕಳು ಉದ್ಯೋಗದಲ್ಲಿ ತೊಡಗಿದ್ದಾರೆ. ನಾನು ಆರಾಮವಾಗಿ ಮನೆಯಲ್ಲಿ ಇರುತ್ತೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾನೆ.