ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಎಸ್‌ಆರ್‌ಎ ಪಿಯು ಕಾಲೇಜಿನ ವಿದ್ಯಾರ್ಥಿ ಪಿಯು ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಹಾಗು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ರಸಾಯನ ಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಗಣಿತ ಹಾಗು ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಇಂಗ್ಲಿಷ್‌ನಲ್ಲಿ 94 ಅಂಕದೊಂದಿಗೆ ಒಟ್ಟು 594 ಮಾರ್ಕ್ಸ್ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ, ನನ್ನ ಸಾಧನೆಗೆ ನನ್ನ ಶಿಕ್ಷಕರ ಪ್ರೋತ್ಸಾಹವೇ ಕಾರಣ. ಅವರ ಪ್ರೋತ್ಸಾಹದಿಂದ ಇಂದು ಈ ಸಾಧನೆ ಮಾಡಿದ್ದೇನೆ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆ ಹೊಂದಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 608 ಅಂಕ ಗಳಿಸಿದ್ದ ಪ್ರಥಮೇಶ್ ಶ್ರೀಕಾಂತ ಕಾರ್ವೆಕರ್, ಇಂದು ಪಿಯುಸಿಯಲ್ಲಿ 594 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ತನ್ನ ತಂದೆ-ತಾಯಿಯ ಕಾಯಕವಾಗಿರುವ ಸೀರೆ ನೇಯ್ಗೆಯ ವೃತ್ತಿಗೆ ಸಹಾಯ ಮಾಡುತ್ತ ಬಿಡುವಿನ ವೇಳೆಯಲ್ಲಿ ಓದಿ ಇಂದು ಈ ಸಾಧನೆ ಮಾಡಿದ್ದಾರೆ. ಮಗನ ಸಾಧನೆಗೆ ತಂದೆ ಶ್ರೀಕಾಂತ್, ತಾಯಿ ಲಲಿತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಓದಿ : ದ್ವಿತೀಯ ಪಿಯುಸಿ ಫೇಲ್ ಆದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ