ಬಾಗಲಕೋಟೆ: ತಾಲೂಕಿನ ಪ್ರಸಿದ್ಧ ಕ್ಷೇತ್ರ ಚಿಮ್ಮನಕಟ್ಟಿ ಗ್ರಾಮದಲ್ಲಿ ನೀರಿನಿಂದ ದೀಪ ಬೆಳೆಗಿಸುವ ಮೂಲಕ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ನೀರಿನಿಂದ ದೀಪ ಪ್ರಜ್ವಲಿಸುವ ಬಗ್ಗೆ ನೋಡಲು ವಿವಿಧ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಮೊಹರಂ ಆಚರಣೆ ನಡೆಯುತ್ತದೆ.
ದೀಪ ಉರಿಯುವುದು ಎಣ್ಣೆಯಿಂದಲ್ಲ, ಬದಲಿಗೆ ನೀರು. ಹೌದು. ಇಲ್ಲಿ ಮೊಹರಂ ಪವಾಡ ಎನ್ನುವಂತೆ ನೀರಿನಿಂದ ದೀಪ ಬೆಳಗಿಸುತ್ತಾರೆ. ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರನ್ನು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ನೀರು ಹಾಕಿ ದೀಪ ಬೆಳಗಿಸುತ್ತಾರೆ. ಅಲ್ಲದೇ ದೇಸಾಯಿಯವರ ಮನೆಯಲ್ಲಿ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.
ಸುಮಾರು 10ಕ್ಕೂ ಹೆಚ್ಚು ಟ್ರ್ಯಾಕ್ಟರ್ ಕಟ್ಟಿಗೆ ಸಂಗ್ರಹಿಸಿ ಅಗ್ನಿ ಕುಂಡ ತಯಾರಿಸುವ ಭಕ್ತರು ಇಡೀ ರಾತ್ರಿ ಕಟ್ಟಿಗೆ ಸುಟ್ಟು ಕೆಂಡ ಮಾಡುತ್ತಾರೆ. ಬೆಳಗ್ಗೆ ದರ್ಗಾಕ್ಕೆ ಆಗಮಿಸುವ ಲಾಲಸಾಬ ಅಜ್ಜ ಅಗ್ನಿ ಕುಂಡದಲ್ಲಿ ಎರಡು ಬಾರಿ ಹಾದು ಹೋಗುವ ಮೂಲಕ ಚಾಲನೆ ನೀಡುತ್ತಾರೆ. ನಂತರ ಡೋಲಿ ಹೊತ್ತವರು ಸೇರಿದಂತೆ ಬೇಡಿಕೊಂಡವರೆಲ್ಲ ಅಗ್ನಿಯಲ್ಲಿ ಹಾಯುತ್ತಾರೆ.
ನಂತರ ಹೇಳಿಕೆ ಹೇಳುವ ಅಜ್ಜನವರು ಮುಂಬರುವ ರಾಜ್ಯ ಹಾಗೂ ದೇಶದ ರಾಜಕೀಯ ವಿಷಯಗಳ ಕುರಿತು ಭವಿಷ್ಯ ನುಡಿಯುತ್ತಾರೆ. ಈ ಬಾರಿ ಮಳೆ ಸಾಕಷ್ಟು ಇದ್ದು, ಬೆಳೆ ಚನ್ನಾಗಿ ಬರಲಿದೆ. ರಾಜಕೀಯ ಸ್ಥಿರತೆ ಇರುವುದಿಲ್ಲ ಎಂದು ಲಾಲಸಾಬ ಅಜ್ಜನವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಭಾವೈಕ್ಯತೆಯ ಪ್ರತೀಕ: 5 ತಲೆಮಾರುಗಳಿಂದ ಹಿಂದೂ ಕುಟುಂಬದಿಂದ ಮೊಹರಂ ಆಚರಣೆ