ಬಾಗಲಕೋಟೆ : ನಗರದ ಕಣವಿ ಶ್ರೀ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಉತ್ಸವ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷ ಯುಗಾದಿ ಪಾಂಡ್ಯ ದಿನದಂದು ಜಾತ್ರಾ ಮಹೋತ್ಸವ ನಡೆಯುತ್ತದೆ. ಮರುದಿನ ಅಗ್ಗಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಕಣವಿ ಶ್ರೀ ವೀರಭದ್ರೇಶ್ವರ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದೆ. ಉಗ್ರ ಸ್ವರೂಪದ ದೇವರು ಎಂದು ಹೆಗ್ಗಳಿಕೆ ಪಡೆದಿರುವ ಈ ದೇವಾಲಯಕ್ಕೆ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಯುಗಾದಿ ದಿನದಂದು ರಥವನ್ನು ಸಾವಿರಾರು ಸಂಖ್ಯೆಯ ಜನಸ್ತೋಮದ ಮಧ್ಯೆ ಅದ್ಧೂರಿಯಾಗಿ ಎಳೆಯಲಾಯಿತು.
ಮರುದಿನ ಅಗ್ಗಿ ಉತ್ಸವ ಅಂಗವಾಗಿ ಸಂಜೆ ದೇವಾಲಯ ಮುಂದೆ ಕುಂಡ ತೆಗೆಯಲಾಗಿರುತ್ತದೆ. ಇದರಲ್ಲಿ ಬೆಂಕಿಯ ಕೆಂಡ ಹಾಕಲಾಗಿರುತ್ತದೆ. ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಪಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ಐದು ಸುತ್ತು ಪ್ರದರ್ಶನ ಹಾಕಿ ನಂತರ ಅಗ್ಗಿ ಉತ್ಸವದಲ್ಲಿ ಮೊದಲು ಸ್ವಾಮೀಜಿಗಳು ನಡೆದುಕೊಂಡು ಹೋಗುತ್ತಾರೆ. ನಂತರ ಎಲ್ಲಾ ಭಕ್ತರು ಸಾಮೂಹಿಕವಾಗಿ ಅಗ್ಗಿಯನ್ನು ಹಾಯ್ದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: ಬೇವು-ಬೆಲ್ಲ ತಿಂದ್ಮೇೆಲೆ ಕರೆಂಟ್ ಶಾಕ್.. ರಾಜ್ಯದಲ್ಲಿ ಏಪ್ರಿಲ್ 1ರಿಂದಲೇ ಪರಿಷ್ಕೃತ ವಿದ್ಯುತ್ ದರ ಜಾರಿ..
ಇದೇ ಸಮಯದಲ್ಲಿ ಪುರವಂತರು ವೀರಭದ್ರೇಶ್ವರ ಮಂತ್ರ ಹೇಳುತ್ತಾ ಶಸ್ತ್ರವನ್ನು ದೇಹದಲ್ಲಿ ಹಾಕಿಕೊಂಡು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಭಕ್ತರು ಸಹ ತಮ್ಮ ಹರಕೆಗೆ ಅನುಗುಣವಾಗಿ ಬಾಯಿಗೆ ಹಾಗೂ ಕೈಯಲ್ಲಿ ಶಸ್ತ್ರ ಹಾಕಿಕೊಂಡು ಹರಕೆಯನ್ನು ತೀರಿಸುತ್ತಾರೆ. ಶಾಸಕ ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯರಾದ ಪಿ.ಹೆಚ್. ಪೂಜಾರ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು. ಅಲ್ಲದೇ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.