ಬಾಗಲಕೋಟೆ : ನಗರದ ಕಿಲ್ಲಾ ಪ್ರದೇಶದಲ್ಲಿ ಇರುವ ದ್ಯಾಮವ್ವ, ದುರಗಮ್ಮ ದೇವತೆಯರ 32 ವರ್ಷದ ಬಳಿಕ ಜಾತ್ರೆ ಹಮ್ಮಿಕೊಂಡಿದ್ದು, ಉತ್ಸಾಹ ಇಮ್ಮಡಿಸಿದೆ. ಗುಡಿಯಲ್ಲಿ ಉಭಯ ದೇವಿಯರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಊರಿನ ಪ್ರತಿ ಮನೆ ಮನೆಯಲ್ಲಿ ದೇವಿ ಜಾತ್ರೆ ನಿಮಿತ್ತ ಸಂಪ್ರದಾಯ ಆಚರಣೆ ಮಾಡಲಾಗುತ್ತಿದೆ.
ಮುಖ್ಯವಾಗಿ 4 ಮಂಗಳವಾರ ಮನೆಯಲ್ಲಿ ಕುಟ್ಟೋ ಹಾಗಿಲ್ಲ, ಬೀಸೋ ಹಾಗಿಲ್ಲ, ರೊಟ್ಟಿಯನ್ನು ಸಹ ಬೇಯಿಸೋವಂಗಿಲ್ಲ ಜೊತೆಗೆ ಕೃಷಿ ಚಟುವಟಿಕೆ ಮಾಡೋಹಾಗಿಲ್ಲ. ಅಲ್ಲದೆ, ಕೂಲಿ ಕಾರ್ಮಿಕರು ಸಹ ಅಂದು ಕೆಲಸ ಮಾಡದೇ ಗ್ರಾಮ ದೇವತೆಯರ ಆರಾಧನೆಯಲ್ಲಿ ಮುಳುಗಿರುತ್ತಾರೆ. ಕೊನೆಯ ಮಂಗಳವಾರ ವೈಭವದ ಜಾತ್ರೆ ನಡೆಸುತ್ತಾರೆ. ಶುಕ್ರವಾರದ ನಂತರ ಜಾತ್ರೆಗೆ ತೆರೆ ಬೀಳಲಿದೆ. ಗಂಡನ ಮನೆಗೆ, ಇಲ್ಲವೆ ಓದಲು ಹೋದ ಹೆಣ್ಣುಮಕ್ಕಳು ಊರಿನ ಜಾತ್ರೆಗೆ ತಪ್ಪದೆ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಬಾಗಲಕೋಟೆ ಜಾತ್ರೆ : ಇನ್ನು ನಿರಂತರ 5 ದಿನಗಳ ಕಾಲ ನಡೆಯುವ ಜಾತ್ರೆ ಹಿನ್ನೆಲೆ ನಗರದ ತುಂಬೆಲ್ಲಾ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಮೊದಲ ದಿನ ನೂರಾರು ಮಹಿಳೆಯರು ಕುಂಭಮೇಳ ನಡೆಸಿ ಗಮನ ಸೆಳೆದರು. ಇನ್ನುಳಿದ ದಿನ ಹೋಮ ಹವನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಜಾತ್ರೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿದ್ದರು. ಬರುವ ಭಕ್ತಾದಿಗಳಿಗೆ ನಿತ್ಯ ಭಕ್ತರಿಗೆ ಬೆಲ್ಲದ ಪಾಯಿಸ ಸೇರಿದಂತೆ ಅನ್ನ ಸಂತರ್ಪಣೆ ಕಾಯ೯ ನಡೆಸಲಾಯಿತು.
32 ವಷ೯ಗಳ ಬಳಿಕ ಗ್ರಾಮ ದೇವತೆ ದ್ಯಾಮವ್ವ, ದುರಗವ್ವರ ಜಾತ್ರೆ ನಡೆದಿದೆ. ಜಾತಿ-ಮತ, ಪಂಥ ಮರೆತು ಎಲ್ಲರೂ ಒಂದಾಗಿ ಅದ್ಧೂರಿಯಾಗಿ ಜಾತ್ರೆ ಮಾಡುವ ಮೂಲಕ ಭಕ್ತರು ದೇವಿ ಕೃಪೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಯಾವುದಾರೂ ಮಾಹಾಮಾರಿ ರೋಗ ಬಂತು ಅಂದ್ರೆ, ವಿಶೇಷ ಪೂಜೆ ಪುನಸ್ಕಾರ ಮಾಡಿ ದೇವಿಗೆ ಮೊರೆ ಹೋಗುತ್ತಿದ್ದರು. ಈಗ ಕೊರೊನಾ ಹಾಗೂ ಒಮಿಕ್ರಾನ್ ಮಾಹಾಮಾರಿ ಜಗತ್ತನ್ನು ಕಾಡುತ್ತಿದ್ದು, ಜನರನ್ನು ರಕ್ಷಿಸುವಂತೆ ದೇವರ ಮೊರೆ ಹೋಗಿದ್ದಾರೆ.