ಬಾಗಲಕೋಟೆ: ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಹಾಗೂ ರೈತಾಪಿ ವರ್ಗದವರ ಮನರಂಜನೆ ಆಗಿರುವ ತೆರೆದ ಬಂಡಿ ಸ್ಪರ್ಧೆಯನ್ನು ಮಹಾಲಿಂಗಪುರ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ವಿಜೃಂಭಣೆಯಿಂದ ನಡೆಸಿದ್ದಾರೆ. ವಿವಿಧ ರಾಜ್ಯಗಳಿಂದ ಸುವರ್ಣಮಹೋತ್ಸವದ ತೆರೆದ ಬಂಡಿ ಸ್ಪರ್ಧೆಗೆ ಜನ ಬಂದಿದ್ದಾರೆ. ಈ ಸರ್ಧೆ ಹಮ್ಮಿಕೊಳ್ಳುವ ಜೊತೆಗೆ ಪ್ರಥಮ ಬಹುಮಾನ ಕಾರು ನೀಡುವ ಮೂಲಕ ಇಡೀ ರಾಜ್ಯದಲ್ಲಿಯೇ ಗಮನ ಸೆಳೆಯುವಂತಾಗಿದೆ.
ಹೀಗೆ ಎತ್ತುಗಳನ್ನು ಹಿಡಿದುಕೊಂಡು ಬರುತ್ತಿರುವ ರೈತರು, ಇನ್ನೊಂದೆಡೆ ಬಂಡಿಯ ಮೇಲೆ ಕುಳಿತುಕೊಂಡು ಎತ್ತು ಓಡಿಸುತ್ತಾ ಪ್ರಥಮ ಬಹುಮಾನ ಕಾರು ಪಡೆಯಬೇಕು ಎಂಬ ಹಂಬಲ ಇಂತಹ ದೃಶ್ಯ ಕಂಡು ಬಂದಿರುವುದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ, ಹೌದು ಕಳೆದ 50 ವರ್ಷಗಳಿಂದ ಇಂತಹ ರೈತಾಪಿ ಕ್ರೀಡೆಯನ್ನು ಬೆಳೆಸಿಕೊಂಡ ಬಂದ ಹಿನ್ನೆಲೆ, ಸುವರ್ಣಮಹೋತ್ಸವದ ನಿಮಿತ್ತ ಬಸವೇಶ್ವರ ಜಾತ್ರಾ ಕಮೀಟಿ ವತಿಯಿಂದ ಅಂತರ್ ರಾಜ್ಯ ಮಟ್ಟದ ತೆರಬಂಡಿ ಸ್ಪರ್ಧೆಯ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಲಿಂಗಪುರದ ಖ್ಯಾತ ವೈದ್ಯರು ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಡಾ. ಎ ಆರ್ ಬೆಳಗಲಿ ಅವರು ಚಾಲನೆ ನೀಡಿದರು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ರಾಜ್ಯದಿಂದಲೂ ರೈತರು ಸ್ಪರ್ಧೆಗಾಗಿ ಆಗಮಿಸಿದ್ದರು. ವಿವಿಧ ಜಿಲ್ಲೆ ರಾಜ್ಯಗಳಿಂದ ಜನರು ಆಗಮಿಸಿ ಸ್ಪರ್ಧೆಯ ರೋಮಾಂಚನಕಾರಿ ದೃಶ್ಯಗಳನ್ನು ಕಣ್ತುಂಬಿಕೊಂಡರು. ಹೀಗೆ ವಿವಿಧ ರಾಜ್ಯಗಳಿಂದ 131 ಜೋಡಿ ಎತ್ತುಗಳು ತೆರಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದವು.
'ದೇಶಿ ಕ್ರೀಡೆಗಳನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯ ಎಲ್ಲ ಜನರಿಂದ ಆಗಬೇಕಾಗುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಎತ್ತುಗಳನ್ನು ಸಾಕುವುದು ಕಡಿಮೆಯಾಗುತ್ತದೆ ಜಾನುವಾರುಗಳ ಮೇಲಿನ ಪ್ರೀತಿ ರೈತರಿಗೆ ಹೆಚ್ಚಾಗಬೇಕು ಎಂದರು. ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ, ಆಕರ್ಷಕ ಬಹುಮಾನ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹಿಸಬೇಕು' ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಬೆಳಗಲಿ ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳನ್ನು ರೈತರು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಅಖಾಡಕ್ಕೆ ಇಳಿಸುತ್ತಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಎತ್ತುಗಳಿಗೆ ಅಗತ್ಯವಿರುವ ತರಬೇತಿಯನ್ನು ನೀಡಿರುತ್ತಾರೆ. ಹೀಗಿರುವಾಗ ರೈತ ಹಾಗೂ ಎತ್ತುಗಳ ಮನೋರಂಜನೆಯಾತ್ಮಕ ಹಾಗೂ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಭಾಗವಹಿಸಿ, ಎಲ್ಲ ಜಂಜಾಟವನ್ನು ಮರೆಯುತ್ತಾರೆ. ಪ್ರಥಮ ಬಹುಮಾನ ಕಾರು ಆಗಿದ್ದು, ಒಟ್ಟು 31 ಬಹುಮಾನ ನೀಡಲಾಗುತ್ತಿದೆ ಎಂದು ಸ್ಥಳೀಯ ಎಸ್ ಎಮ್ ಉಳ್ಳಾಗಡ್ಡಿ ಹೇಳಿದರು.
ಇದರಲ್ಲಿ ಕಾರು, ಬೈಕ್, ಬೆಳ್ಳಿಯ ಕಡಗ, ಬೆಳ್ಳಿಯ ಗದೆ ಸೇರಿದಂತೆ ಇತರ ನಗದು ಹಣ ಬಹುಮಾನ ನೀಡಲಾಗುತ್ತದೆ. ಈ ಮೂಲಕ ರೈತರನ್ನು ಆಕರ್ಷಣೆ ಮಾಡಲಾಗುತ್ತದೆ. ಇಂದಿನ ಆಧುನಿಕ ಯುಗವು ಎಷ್ಟೇ ಭರಾಟೆಯಿಂದಾಗಿ ಮುಂದುವರೆಯುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ರೈತಾಪಿ ವರ್ಗದ ಜನರಿಗಾಗಿ ಗ್ರಾಮೀಣ ಕ್ರೀಡೆ ಏರ್ಪಡಿಸುವ ಮೂಲಕ ಗಮನ ಸೆಳೆಯಲಾಗುತ್ತಿದೆ ಎಂದು ಉಳ್ಳಾಗಡ್ಡಿ ಅವರು ತಿಳಿಸಿದರು.
ಇದನ್ನೂ ಓದಿ: ಹಾವೇರಿ: ಮಿಂಚಿನಂತೆ ಓಡಿ ನೋಡುಗರನ್ನು ರೋಮಾಂಚನಗೊಳಿಸಿದ ಎತ್ತುಗಳು