ಬಾಗಲಕೋಟೆ: ಸರ್ಕಾರ 15 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿ, ಯಾವುದೇ ಹಬ್ಬ ಹರಿದಿನ ಆಚರಣೆ ಮಾಡುವಂತಿಲ್ಲ ಎಂಬ ಆದೇಶ ಜಾರಿಗೊಳಿಸಿದೆ. ಇಷ್ಟಾದರೂ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ರಂಜಾನ್ ನಿಮಿತ್ತ ಗುಂಪುಗೂಡಿದ್ದ ಜನರನ್ನು ಚದುರಿಸಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಜಮಖಂಡಿ ಪಟ್ಟಣದ ಜಾಮೀಯಾ ಮಸೀದಿ ಬಳಿ ರಂಜಾನ್ ನಿಮಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಎಂದಿನಂತೆ ಚದುರಿಸಲು ಮುಂದಾಗಿದ್ದಾರೆ. ಆಗ ಅಲ್ಲಿ ಸೇರಿದ ಜನರು ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.
ನಂತರ ವಿಷಯ ತಿಳಿದು ಜಮಖಂಡಿ ಉಪ ವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜನರನ್ನು ಲಾಠಿ ಬೀಸಿ ಚದುರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ರಂಜಾನ್ ಹಾಗೂ ಬಸವ ಜಯಂತಿಯನ್ನು ಮನೆಯಲ್ಲಿಯೇ ಆಚರಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಎಸ್.ಪಿ. ಲೋಕೇಶ್ ಅವರು ಜನರಿಗೆ ಮನವಿ ಮಾಡಿಕೊಂಡಿದ್ದರು. ಆದರೂ ಸಹ ನಿಯಮ ಉಲ್ಲಂಘಿಸಿ ಗುಂಪು ಸೇರಿ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಈಗಾಗಲೇ ಹಲವರನ್ನು ಬಂಧನ ಮಾಡಿ, ವಿಚಾರಣೆ ನಡೆಸಲಾಗಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.