ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣಾ ಹಾಗೂ ಮಲ್ಲಪ್ರಭಾ ನದಿಯ ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಕೂಡಲಸಂಗಮದಲ್ಲಿ ಸಭೆ ನಡೆಸಲಾಯಿತು.
ಹುನಗುಂದ ತಾಲೂಕಿನಲ್ಲಿ ಕೃಷ್ಣಾ, ಮಲ್ಲಪ್ರಭಾ ನದಿಯ ಪ್ರವಾಹದಿಂದ 21 ಗ್ರಾಮಗಳು ಜಲಾವೃತಗೊಂಡು ತೊಂದರೆಗೆ ಒಳಗಾಗುತ್ತಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಗಮನ ಹರಿಸಲು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಸಭೆ ನಡೆಸಲಾಗಿದೆ.
ಹುನಗುಂದ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನತೆ ಹಾಗೂ ಸಂತ್ರಸ್ತರನ್ನು ಉದ್ದೇಶಿಸಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆಯೇ ಪ್ರವಾಹ ಬಂದು 21 ಗ್ರಾಮಗಳಲ್ಲಿ ಜಲಾವೃತಗೊಂಡು ತೊಂದರೆ ಆಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಾದರಿಯಲ್ಲಿ ಶಾಶ್ವತ ಪರಿಹಾರ ಸರ್ಕಾರ ನೀಡಬೇಕಾಗಿದೆ.
ಈ ಹಿಂದೆ ಶಾಸಕನಾಗಿದ್ದ ಸಮಯದಲ್ಲಿ ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಸರ್ಕಾರದ ಮುಂದೆ ಪ್ರಸ್ತಾಪ ಮಾಡಲಾಗಿದೆ. ಆದರೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ವಿಳಂಬ ಧೋರಣೆ ತಾಳಿದರೆ ಮುಂದೆ ಹೋರಾಟದ ರೂಪುರೇಷೆಗಳನ್ನು ಹಾಕಿಕೊಳ್ಳಲು ಮತ್ತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.