ಬಾಗಲಕೋಟೆ: ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ಧ ಪತಿ-ಪತ್ನಿಯರಿಗೆ ನ್ಯಾಯಾಧೀಶರು ಬುದ್ಧಿಮಾತು ಹೇಳಿ ಮತ್ತೆ ಜೊತೆಗೆ ಸಂಸಾರ ಮಾಡುವಂತೆ ಹೇಳಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನವನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೋಡಿಗಳನ್ನು ಒಂದು ಮಾಡಲಾಯಿತು.
ಲೋಕ ಅದಾಲತ್‍ನಲ್ಲಿ ವಿಚ್ಛೇದನಕ್ಕೆ ಮೊರೆಹೋಗಿದ್ದ ಕೃಷ್ಣಾ ಮತ್ತು ಜ್ಯೋತಿ ಹಾಗೂ ಕಮಲ ಮತ್ತು ಕೃಪಾ ಎಂಬ ದಂಪತಿಗಳನ್ನು ಅವರ ಸಮಸ್ಯೆ ಆಲಿಸಿದ ಬಳಿಕ ಒಂದಾಗಿಸುವ ಕಾರ್ಯ ಮಾಡಲಾಯಿತು. ಈ ಜೋಡಿಗಳನ್ನು ಒಂದು ಮಾಡುವ ಕಾರ್ಯಕ್ಕೆ ವಕೀಲರಾದ ಸಂತೋಷ ಜೋಶಿ, ಎಸ್.ಎನ್. ಯಾದವಾಡ, ಕೆ.ಹೆಚ್. ಲಮಾಣಿ ಸಾಕ್ಷಿಯಾದರು.
ಇನ್ನೊಂದು ಪ್ರಕರಣದಲ್ಲಿ ಚಾಲಕನೊಬ್ಬ ಎರಡು ಮದುವೆಯಾಗಿದ್ದು, ಎರಡನೇ ಹೆಂಡತಿ ಜೊತೆ ಸಂಸಾರ ಮಾಡುವ ಸಲುವಾಗಿ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಕುರಿತು ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದಲ್ಲಿ ಮೊದಲ ಪತ್ನಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಒಂದು ಮಗು ತಂದೆಯೊಂದಿಗೆ, ಇನ್ನೊಂದು ಮಗು ತಾಯಿಯೊಂದಿಗೆ ಇದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರೇ ಇಬ್ಬರು ಹೆಂಡತಿಯರ ಜೊತೆಗೆ ಸಂಸಾರ ಮಾಡುವಂತೆ, ಇದಕ್ಕೆ ಸಂಬಂಧಿಸಿದಂತೆ ಪತಿಯಿಂದ ಒಪ್ಪಿಗೆ ಪತ್ರ ಬರೆಸಿಕೊಳ್ಳುವಂತೆ ನ್ಯಾಯಾಧೀಶರು ಸೂಚಿಸಿದರು.
ಹೀಗೆ ಸದರಿ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ದಾಖಲಾಗದೇ ಇರುವ 730 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 280 ಹಾಗೂ ನ್ಯಾಯಾಲಯದಲ್ಲಿ ದಾಖಲಾದ 4,106 ಬಾಕಿ ಪ್ರಕರಣಗಳ ಪೈಕಿ 763 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಅದಾಲತ್‍ನಲ್ಲಿ ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಅನಿಲಕಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶ ಪ್ರಕಾಶ ವಿ., ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಎಂ.ಹೆಚ್. ಕಡಕೋಳ ಉಪಸ್ಥಿತರಿದ್ದರು.