ಬಾಗಲಕೋಟೆ: ಕಾಳದಂಧೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ 10 ಜನರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂವರು ಹಾಗೂ ಖಾಸಗಿ ಆಸ್ಪತ್ರೆಯ ಏಳು ಜನ ಸಿಬ್ಬಂದಿ ಬಂಧಿಸಲಾಗಿದೆ ಎಂದು ಎಸ್‌ಪಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ಕೋವಿಡ್ ಆಸ್ಪತ್ರೆಯ ವಿಠ್ಠಲ ಚಲವಾದಿ, ರಂಗಪ್ಪ ದಿನ್ನಿ, ರಾಹುಲ್ ಗುಡಿಮನಿ ಹಾಗೂ ಖಾಸಗಿ ಆಸ್ಪತ್ರೆಯ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ್ ಲಮಾಣಿ, ಗಣೇಶ್ ನಾಟಕಾರ್, ಪ್ರವೀಣ ಕೋತ್ಲಿ, ಮಹಾಂತಗೌಡ ಬಿರಾದಾರ್ ಬಂಧಿತ ಆರೋಪಿಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧವನ್ನು 25 ರಿಂದ -30 ಸಾವಿರಕ್ಕೆ ಮಾರಾಟ ಮಾಡುವ ವೇಳೆ ದಾಳಿ ಮಾಡಿ ಔಷಧ ಸಮೇತ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಜಾಲದಲ್ಲಿ ಸಿಕ್ಕವರನ್ನು ಬಿಡುವುದಿಲ್ಲ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.