ಟೋಕಿಯೋ(ಜಪಾನ್): ಭಾರತೀಯ ಆರ್ಚರಿಪಟು ಹರ್ವಿಂದರ್ ಸಿಂಗ್ ಅವರು ಶುಕ್ರವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಇತಿಹಾಸ ಸೃಷ್ಟಿಸಿದರು.
ದಕ್ಷಿಣ ಕೊರಿಯಾದ ಮಿನ್ ಸು ಕಿಮ್ ಅವರನ್ನು 6-5 ಪಾಯಿಂಟ್ಗಳ ಅಂತರದಿಂದ ಸೋಲಿಸಿದ ಹರ್ವಿಂದರ್ ಸಿಂಗ್, ಯುಮೆನೊಶಿಮಾ ಫೈನಲ್ ಫೀಲ್ಡ್ನಲ್ಲಿ ಭಾರತದ ಮೊದಲ ಬಿಲ್ಲುಗಾರಿಕಾ ವಿಭಾಗದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಮೊದಲ ಸೆಟ್ನಲ್ಲಿ 10,7,9 ಅಂಕಗಳನ್ನು ಹರ್ವಿಂದರ್ ಗಳಿಸಿದ್ದರು. ಇದೇ ವೇಳೆಯಲ್ಲಿ ದಕ್ಷಿಣ ಕೊರಿಯಾದ ಬಿಲ್ಲುಗಾರ 9, 6, 9 ಪಾಯಿಂಟ್ಗಳನ್ನು ಗಳಿಸಿದ್ದರು. ಅಂದರೆ ಮೊದಲ ಸೆಟ್ ಮುಗಿಯುಷ್ಟರಲ್ಲಿ ಹರ್ವಿಂದರ್ 26 ಅಂಕ ಮತ್ತು ಮಿನ್ ಸು ಕಿಮ್ 25 ಪಾಯಿಂಟ್ ಪಡೆದಿದ್ದರು.
ಎರಡನೇ ಸೆಟ್ನಲ್ಲಿ ಮಿನ್ ಸು ಕಿಮ್ 29 ಪಾಯಿಂಟ್ ಪಡೆದು, ಆಟದ ರೋಚಕತೆಯನ್ನು ಹೆಚ್ಚಿಸಿದರು. ಮೂರನೇ ಸೆಟ್ನಲ್ಲಿ ಹರ್ವಿಂದರ್ 28, ಮಿನ್ ಸು ಕಿಮ್ 25 ಪಾಯಿಂಟ್ಗಳನ್ನು ಪಡೆದರು. ನಾಲ್ಕನೇ ಸೆಟ್ ಕೂಡಾ ಇಬ್ಬರಲ್ಲೂ ಒಂದೇ ರೀತಿಯ ಅಂಕಗಳನ್ನು ತಂದುಕೊಟ್ಟಿತ್ತು.
ಇದರಿಂದಾಗಿ ಕೊನೆಯ ಅಂದರೆ ಐದನೇ ಸೆಟ್ ನಿರ್ಣಾಯವಾಗಿತ್ತು. ಈಗ ಹರ್ವೀಂದರ್ 27 ಅಂಕಗಳನ್ನು, ಮಿನ್ ಸು ಕಿಮ್ 26 ಅಂಕಗಳನ್ನು ಪಡೆದುಕೊಳ್ಳುವ ಮೂಲಕ, ಕಂಚಿನ ಪದಕವನ್ನು ಭಾರತೀಯ ಆಟಗಾರ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: ಎದುರಾಳಿ ನೀಡಿದ ಬಲವಾದ ಪಂಚ್ಗೆ ಮಹಿಳಾ ಬಾಕ್ಸರ್ ಸಾವು