ಟೋಕಿಯೋ(ಜಪಾನ್): ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯರ ಪಾಲಿಗೆ ನಾಳೆ ಮಹತ್ವದ ದಿನವಾಗಿದ್ದು, ಕೆಲವೊಂದು ಪ್ರಮುಖ ಪಂದ್ಯಗಳು ನಡೆಯಲಿವೆ. ಮೊದಲ ಎಸೆತದಲ್ಲೇ ಜಾವಲಿನ್ ಥ್ರೋದಲ್ಲಿ ಫೈನಲ್ಗೇರಿರುವ ನೀರಜ್ ಚೋಪ್ರಾ ಹಾಗೂ ಗಾಲ್ಫ್ನಲ್ಲಿ ಎರಡನೇ ಸ್ಥಾನದಲ್ಲಿರುವ ಕನ್ನಡತಿ ಆದಿತಿ ಪದಕಕ್ಕಾಗಿ ಸೆಣಸಾಡಲಿದ್ದಾರೆ.
ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ 86:65 ಮೀಟರ್ ದೂರ ಎಸೆದು ಫೈನಲ್ಗೆ ಅವಕಾಶ ಪಡೆದುಕೊಂಡಿರುವ ನೀರಜ್ ಚೋಪ್ರಾ ಮೇಲೆ ಭಾರತೀಯರು ಅಪಾರ ನಂಬಿಕೆ ಇಟ್ಟುಕೊಂಡಿದ್ದು, ದೇಶಕ್ಕೆ ಮತ್ತೊಂದು ಪದಕ ತಂದುಕೊಡಲಿದ್ದಾರೆ ಎಂಬ ಭರವಸೆ ಇದೆ.
ನಾಳೆ ಯಾವೆಲ್ಲ ಪಂದ್ಯಗಳು
- ಜಾವಲಿನ್ ಥ್ರೋ: ನೀರಜ್ ಚೋಪ್ರಾ
23 ವರ್ಷದ ನೀರಜ್ ಚೋಪ್ರಾ ನಾಳೆಯ ಜಾವಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದು, ಈ ಮೂಲಕ ಭಾರತಕ್ಕೆ ಮೊದಲ ಪದಕ ತಂದು ಕೊಡುವ ಇರಾದೆಯಲ್ಲಿದ್ದಾರೆ.
- ಗಾಲ್ಫ್: ಆದಿತಿ ಅಶೋಕ್
ಗಾಲ್ಫ್ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನದ ಮೂಲಕ ಎರಡನೇ ಸ್ಥಾನದಲ್ಲಿರುವ ಕನ್ನಡತಿ ಆದಿತಿ ಅಶೋಕ್ ನಾಳೆ ನಾಲ್ಕನೇ ರೌಂಡ್ನಲ್ಲಿ ಆಡಲಿದ್ದು, ಉತ್ತಮ ಪ್ರದರ್ಶನ ನೀಡಿದರೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಲಿದ್ದಾರೆ.
ಇದನ್ನೂ ಓದಿರಿ: ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಕನ್ನಡತಿ ಅದಿತಿ ಅಶೋಕ್
23 ವರ್ಷದ ಆದಿತಿ, ಈಗಾಗಲೇ ಆಡಿರುವ ಮೂರು ರೌಂಡ್ಗಳಿಂದ 68 ಅಂಕ ಗಳಿಕೆ ಮಾಡಿ ಎರಡನೇ ಸ್ಥಾನದಲ್ಲಿದ್ದು, ನಾಳೆ ಇನ್ನೊಂದು ರೌಂಡ್ ನಡೆಯಲಿದೆ. ಹವಾಮಾನ ವೈಪರೀತ್ಯದಿಂದಾಗಿ ನಾಳೆಯ ಪಂದ್ಯ ರದ್ಧುಗೊಂಡರೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಲಿದ್ದಾರೆ.
- ಕುಸ್ತಿ: ಬಜರಂಗ್ ಪೂನಿಯಾ
65 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಬಜರಂಗ್ ಪೂನಿಯಾ ನಾಳೆ ಕಂಚಿಗಾಗಿ ಸೆಣಸಾಟ ನಡೆಸಲಿದ್ದಾರೆ.