ನವದೆಹಲಿ: ನಿನ್ನೆ ಶತಕೋಟಿ ಭಾರತೀಯರ ಶತಮಾನದ ಕನಸು ನನಸಾದ ದಿನ. ಭಾರತ ಮಾತೆಯ ಹೆಮ್ಮೆಯ ಸುಪುತ್ರ ನೀರಜ್ ಚೋಪ್ರಾ ಸ್ವರ್ಣ ಶಿಕಾರಿಯಾಡಿದ ಸ್ಮರಣೀಯ ಸಂದರ್ಭ. ಇದನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶದ ಪಾಲಿನ ಗೋಲ್ಡನ್ ಡೇ ಎಂದರೂ ಉತ್ಪ್ರೇಕ್ಷೆಯಲ್ಲ.
ಗೆಲುವಿನ ಜಾವೆಲಿನ್ ಥ್ರೋ ಮೂಲಕ ಚಿನ್ನದ ಪದಕ ಗೆದ್ದ ನೀರಜ್ ನಿನ್ನೆಯ ರಾತ್ರಿ ಕಣ್ತುಂಬ ನಿದ್ದೆ ಮಾಡಿ ಆನಂದಿಸಿದೆ ಎಂದು ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಜೊತೆ ತಮ್ಮ ಬಂಗಾರದ ಅನುಭವ ವಿವರಿಸಿದ ಅವರು, "ಬಹಳ ದಿನಗಳ ಬಳಿಕ ನಾನು ನೆಮ್ಮದಿಯಿಂದ ನಿದ್ರಿಸಿದೆ. ರಾತ್ರಿಪೂರ್ತಿ ಗೆದ್ದ ಚಿನ್ನದ ಪದಕವನ್ನು ನನ್ನ ತಲೆದಿಂಬಿನ ಪಕ್ಕದಲ್ಲೇ ಇಟ್ಟುಕೊಂಡು ಮಲಗಿದೆ ಎಂದರು.
ಮೆಡಲ್ ಧರಿಸಿದ ಬಳಿಕ ನಮ್ಮ ರಾಷ್ಟ್ರಗೀತೆ ಕೇಳಿಬಂದಾಗ ನನಗೆ ರೋಮಾಂಚನವಾಯಿತು. ನಿನ್ನೆ ನಾನು ಚಿನ್ನದ ಪದಕ ಗೆದ್ದೆ, ಅದಾದ ಬಳಿಕ ನನ್ನ ತಲೆಯ ಮೇಲಿನ ಅತಿದೊಡ್ಡ ಭಾರ ಇಳಿಯಿತು ಎಂದು ಅವರು ನಿರಾಳರಾದರು.
ಇದನ್ನೂ ಓದಿ: ಟೋಕಿಯೋದಲ್ಲಿ ಇತಿಹಾಸ ಬರೆದ ಚೋಪ್ರಾ.. ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಮುಕುಟ
ನನ್ನ ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳು ಉಂಟಾದವು. ಬಹಳಷ್ಟು ಬಾರಿ ವೃತ್ತಿ ಜೀವನದಲ್ಲಿ ಏನಾಗುತ್ತಿದೆ ಎಂದು ನಾನು ಅನೇಕ ಬಾರಿ ಅಂದುಕೊಂಡಿದ್ದೂ ಇದೆ. ಅದರಲ್ಲೂ ನನಗೆ ಗಾಯವಾದಾಗ ತುಂಬಾ ಯೋಚನೆ ಮಾಡುತ್ತಿದ್ದೆ. ಆದರೆ ಚಿನ್ನ ಗೆದ್ದ ನಂತರ ಯಾವುದೂ ಲೆಕ್ಕಕ್ಕೇ ಬರಲಿಲ್ಲ. ಏನೆಲ್ಲಾ ಆಯಿತೋ ಅದೆಲ್ಲಾ ದೇವರು ನನ್ನ ಒಳ್ಳೆಯದಕ್ಕಾಗಿ ನೀಡಿದ್ದಾನೆ ಎಂದರು.
ಭಾರತೀಯ ರಾಷ್ಟ್ರಗೀತೆಯನ್ನು 2008ರ ನಂತರ ಮೊದಲ ಬಾರಿಗೆ ಶನಿವಾರ ಒಲಿಂಪಿಕ್ಸ್ ವೇದಿಕೆಯಲ್ಲಿ ಮೊಳಗಿಸಲಾಯಿತು. ಶನಿವಾರ ನಡೆದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಗೆದ್ದ ಚೋಪ್ರಾ, ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ವಿಜೇತರಾದ 2 ನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಪಾಣಿಪತ್ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!
ಇದನ್ನೂ ಓದಿ: ಅಥ್ಲೆಟಿಕ್ಸ್ನಲ್ಲಿ 2 ಬಾರಿ ಕೈತಪ್ಪಿದ್ದ ಪದಕ... 3ನೇ ಬಾರಿ 100 ವರ್ಷಗಳ ಭಾರತೀಯರ ಕನಸು ನನಸು ಮಾಡಿದ ನೀರಜ್ ಚೋಪ್ರಾ
ಇದನ್ನೂ ಓದಿ: ಭಾರತದ 'ಬಂಗಾರದ ಪುತ್ರ'ನ ಗುರುವಿನ ಹೆಸರಲ್ಲಿದೆ ಶಾಶ್ವತ ಜಾವೆಲಿನ್ ವಿಶ್ವದಾಖಲೆ!