ಪ್ಯಾರಿಸ್: ಗ್ರೀಕ್ನ ಯುವ ಆಟಗಾರ ಸ್ಟೆಫನೋಸ್ ಸಿಟ್ಸಿಪಾಸ್ ಫ್ರೆಂಚ್ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಎಟಿಪಿ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಓಪನ್ ರನ್ನರ್ ಆಪ್ ಡೇನಿಲ್ ಮೆಡ್ವೆಡೆವ್ ಅವರನ್ನು ಮಣಿಸುವ ಮೂಲಕ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇದು ರೋಲ್ಯಾಂಡ್ ಗ್ಯಾರೋಸ್ನಲ್ಲಿ ಗ್ರೀಕ್ ಆಟಗಾರನ ಎರಡನೇ ಸೆಮಿಫೈನಲ್ ಆಗಿದೆ, ಕಳೆದ ವರ್ಷ ಸೆಮಿಫೈನಲ್ ಪ್ರವೇಶಿಸಿದ್ದ ಇವರನ್ನು ನೊವಾಕ್ ಜೋಕೊವಿಕ್ ಮಣಿಸಿದ್ದರು. ಮಂಗಳವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಸಿಟ್ಸಿಪಾಸ್ ರಷ್ಯನ್ ಸ್ಟಾರ್ ಮೆಡ್ವೆಡೆವ್ ಅವರನ್ನು 6-3, 7-6, 7-5 ರಲ್ಲಿ ಮಣಿಸಿದರು. ಮೆಡ್ವೆದೇವ್ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರವೇಶಿಸಿದ್ದರು. ಆದರೆ ಅವರ ಆಟ ಕೇವಲ 8ರ ಘಟ್ಟದಲ್ಲೇ ಮುಗಿಯಿತು.
ಇನ್ನು 22 ವರ್ಷದ 5ನೇ ಶ್ರೇಯಾಂಕದ ಸಿಟ್ಸಿಪಾಸ್ ಶುಕ್ರವಾರ ತಮ್ಮ ನಾಲ್ಕರ ಘಟ್ಟದ ಪಂದ್ಯದಲ್ಲಿ 6ನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಸವಾಲನ್ನು ಎದುರಿಸಲಿದ್ದಾರೆ. ಜ್ವರೆವ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ನ ಅಲೆಜೆಂಡ್ರೊ ಡೇವಿಡೋವಿಚ್ ಫೋಕಿನಾರನ್ನು 6-4, 6-1, 6-1ರಲ್ಲಿ ಮಣಿಸಿ ಮೊದಲ ಆಟಗಾರನಾಗಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇಂದಿನ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೊವಿಕ್ ಮತ್ತು ನಡಾಲ್ ಪ್ರತ್ಯೇಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲಿದ್ದಾರೆ. ಇಂದು ಗೆದ್ದರೆ ದಿಗ್ಗಜರ ನಡುವಿನ ಕಾದಾಟ ಈ ಬಾರಿ ಸೆಮಿಫೈನಲ್ನಲ್ಲೇ ಕಾಣಬಹುದಾಗಿದೆ.
ಇದನ್ನು ಓದಿ:French Open 2021: ಕ್ವಾರ್ಟರ್ ಫೈನಲ್ ತಲುಪಿದ 'ಕಿಂಗ್ ಆಫ್ ಕ್ಲೇ ಕೋರ್ಟ್'