ಸೇರಾಂಪೋರ, (ಪಶ್ಚಿಮಬಂಗಾಳ): ಕ್ಯಾನ್ಸರ್ ಅನ್ನೋ ಹೆಸರು ಕೇಳಿದ್ರೇ ಎಷ್ಟೋ ಮಂದಿಯ ಜಂಘಾಬಲವೇ ಉಡುಗಿ ಹೋಗುತ್ತೆ. ಆದರೆ, ಈಗ ಕ್ಯಾನ್ಸರ್‌ನ ಕ್ಯೂರ್ ಮಾಡೋಕೆ ಸಾಧ್ಯ. ಟೀಂ ಇಂಡಿಯಾ ಆಟಗಾರ ಯುವಿ ಕ್ಯಾನ್ಸರ್ ಮೆಟ್ಟಿ ಸಾಧಿಸ್ತಿರೋದನ್ನ ನೋಡಿದ್ದೇವೆ. ಈಗ 8ರ ಪೋರ ಬರೀ ಕ್ಯಾನ್ಸರ್‌ನ ಮಾತ್ರ ಹಿಮ್ಮೆಟ್ಟಿಸಿಲ್ಲ. ವಿಶ್ವವನ್ನೇ ಗೆದ್ದಿದ್ದಾನೆ.
ಆಯ್ಕೆಯಾದ 10 ಪೋರರಲ್ಲಿ ಈತನೇ ಅತ್ಯುತ್ತಮ!
ಪಶ್ಚಿಮಬಂಗಾಳದ ಸೇರಾಂಪೋರದ 8 ವರ್ಷದ ಹುಡುಗನೊಬ್ಬ ಈಗ ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾನೆ. ಅರೋಣ್ಯತೇಶ ಗಂಗೂಲಿ ನಿಜಕ್ಕೂ ಗೆಲುವಿನ ಸರದಾರ. ಮಾಸ್ಕೋದಲ್ಲಿ ನಡೆದ ವಿಶ್ವ ಚಿಣ್ಣರ ವಿನ್ನರ್ಸ್ ಗೇಮ್ಸ್-2019ರ ಟೇಬಲ್ ಟೆನ್ನಿಸ್‌ನಲ್ಲಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾನೆ. ಜುಲೈ 4ರಿಂದ 7ರವರೆಗೂ ಕ್ಯಾನ್ಸರ್‌ನಿಂದ ಬದುಕುಳಿದ ಮಕ್ಕಳಿಗಾಗಿಯೇ ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನ ಆಯೋಜಿಸಲಾಗಿತ್ತು. ಟೇಬಲ್ ಟೆನ್ನಿಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದ ಈ ಹುಡುಗ ಬಂಗಾರದ ಪದಕ ಕೊಳ್ಳೆ ಹೊಡೆದಿದ್ದಾನೆ. ಅರೋಣ್ಯತೇಶ ನಿಜಕ್ಕೂ ಅವತ್ತು ಗೆಲುವು ಪಡೆದ ಕ್ಷಣ ನಿಜಕ್ಕೂ ಉತ್ಸಾಹಿತನಾಗಿದ್ದ. ತನಗೆ ಕ್ಯಾನ್ಸರ್ ಇತ್ತು ಅನ್ನೋದನ್ನೂ ಮರೆತಿದ್ದ ಅಂತಾರೆ ಈತನ ತಾಯಿ ಕಾವೇರಿ. ತನ್ನ ಮಗನನ್ನ ಇವರೇ ಮಾಸ್ಕೋದ ವಿಶ್ವ ಚಿಣ್ಣರ ಕ್ರೀಡಾಕೂಟಕ್ಕೆ ಕರೆದೊಯ್ದಿದ್ದರು. ಇದಷ್ಟೇ ಆಗಿದ್ರೇ ಈತನ ಬಗ್ಗೆ ಹೇಳಬೇಕಾಗಿರಲಿಲ್ಲ.
ಟೇಬಲ್ ಟೆನ್ನಿಸ್ ಸೇರಿ ಆರು ಇವೆಂಟ್‌ಗಳಲ್ಲಿ ಸ್ಪರ್ಧಿಸಿದ ಧೀರ!
ಈತ ಟೇಬಲ್ ಟೆನ್ನಿಸ್ ಅಲ್ಲದೇ ಟ್ರ್ಯಾಕ್, ಚೆಸ್, ಫುಟ್ಬಾಲ್, ಸ್ವಿಮಿಂಗ್ ಮತ್ತು ರೈಫಲ್ ಶೂಟಿಂಗ್ ಹೀಗೆ ಆರು ಇವೆಂಟ್‌ಗಳಲ್ಲಿ ದೇಶವನ್ನ ಪ್ರತಿನಿಧಿಸಿದ್ದ. ಈ ಜಾಗತಿಕ ಕ್ರೀಡಾ ಜಾತ್ರೆಗೆ ಭಾರತದಿಂದ 10 ಚಿಣ್ಣರು ಆಯ್ಕೆಯಾಗಿದ್ರೇ, ಬಂಗಾಳವನ್ನ ಇವನೊಬ್ಬನೇ ಪ್ರತಿನಿಧಿಸಿದ್ದ. ಅರೋಣ್ಯತೇಶ ಅದ್ಭುತ ಕ್ರೀಡಾ ಕೌಶಲ್ಯ ಹೊಂದಿದ್ದಾನೆ. ಆದರೆ, ಏಪ್ರಿಲ್ 2016ರಲ್ಲಿ ಈ ಪೋರನಿಗೆ ಕ್ಯಾನ್ಸರ್ ಇದೆ ಅಂತಾ ಪತ್ತೆಯಾಗಿತ್ತು. ಮುಂಬೈನ ಟಿಎಂಹೆಚ್ ಆಸ್ಪತ್ರೆಯಲ್ಲಿ 11 ತಿಂಗಳು ಚಿಕಿತ್ಸೆ ಪಡೆದಿದ್ದ. ಹಲವು ಬಾರಿ ಕಿಮೋಥೆರಪಿ ಹಾಗೂ ಇತರ ಚಿಕಿತ್ಸೆ ಬಳಿಕ ಡಿಸೆಂಬರ್ 2018ರಲ್ಲಿ ಅರೋಣ್ಯತೇಶ ಸಂಪೂರ್ಣ ಗುಣಮುಖನಾಗಿದ್ದ. ಆದರೆ, ನಿರಂತರ ಪರೀಕ್ಷೆಗೊಳಪಡಿಸಬೇಕಾಗಿತ್ತು. ಹಾಗಾಗಿ ಟಿಎಂಹೆಚ್ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಈ ವೇಳೆ ವೈದ್ಯರು ಮತ್ತು ಸ್ವಯಂ ಸೇವಕರು ಈ ಬಾಲಕನಲ್ಲಿದ್ದ ಕ್ರೀಡೆಯ ಬಗೆಗಿನ ಪ್ಯಾಷನ್ ಕಂಡಿದ್ದರು.
ದೇಶದ ಅದ್ಭುತ ಕ್ರೀಡಾ ತಾರೆ ಆಗಬಲ್ಲ ಅಂತಾರೆ ಕೋಚ್‌ಗಳು!
2 ತಿಂಗಳು ನಿರಂತರ ಪರೀಕ್ಷೆಯ ಜತೆ ಅದೇ ಆಸ್ಪತ್ರೆಯಲ್ಲಿದ್ದೇ ಟೇಬಲ್ ಟೆನ್ನಿಸ್ ಸೇರಿ ಇತರ ಕ್ರೀಡೆಗೆ ತಯಾರಿ ನಡೆಸಿದ್ದ. ಬೆಳಗ್ಗೆ 5.30ಕ್ಕೆ ಎದ್ದೇಳುತ್ತಿದ್ದ ಈತ 6 ಗಂಟೆಯಿಂದ 7.30ರವರೆಗೂ ಟ್ರ್ಯಾಕ್‌ನಲ್ಲಿ ಓಡುತ್ತಿದ್ದ ಜತೆಗೆ ಫುಟ್‌ಬಾಲ್ ಪ್ರಾಕ್ಟೀಸ್ ಮಾಡ್ತಿದ್ದ. ಇದಾದ ಬಳಿಕ ಸ್ವಿಮಿಂಗ್, ಟೇಬಲ್ ಟೆನ್ನಿಸ್ ಮತ್ತು ಚೆಸ್ ಆಡುತ್ತಿದ್ದ. ಸಂಜೆಗೆ ಶೂಟಿಂಗ್ ಕ್ಲಾಸ್‌ಗೆ ಅಟೆಂಡ್ ಆಗ್ತಿದ್ದ. ಶೂಟಿಂಗ್ ಕ್ಲಾಸ್‌ಗಾಗಿ ನಿತ್ಯ ಭದ್ರೇಶ್ವರಕ್ಕೆ ಪ್ರಯಾಣ ಬೆಳೆಸ್ತಿದ್ದ. ಶೂಟಿಂಗ್‌ನಲ್ಲಿ ಇನ್ನಷ್ಟು ತರಬೇತಿ ನೀಡಿದ್ರೇ ನಿಜಕ್ಕೂ ದೇಶಕ್ಕೆ ಒಳ್ಳೇ ಕ್ರೀಡಾ ತಾರೆ ಆಗ್ತಾನೆ ಅಂತಾರೆ ಬುಲ್ಸ್ ಐ ಶೂಟಿಂಗ್ ಅಕಾಡೆಮಿ ಚೀಫ್ ಕೋಚ್ ಪಂಕಜ್ ಪಾಡರ್. ಅರೋಣ್ಯತೇಶನಲ್ಲಿರುವ ತಾಳ್ಮೆ, ಏಕಾಗ್ರತೆ ಮತ್ತು ಎನರ್ಜಿಯಿಂದಾಗಿ ಈತ ಏನು ಬೇಕಾದರೂ ಮುಂದೆ ಸಾಧಿಸಬಲ್ಲ ಅಂತಾ ಸ್ವಿಮಿಂಗ್, ಚೆಸ್, ಫುಟ್ಬಾಲ್ ಸೇರಿ ಈತನಿಗೆ ತರಬೇತಿ ನೀಡಿದ ಕೋಚ್‌ಗಳು ಹೇಳ್ತಾರೆ.