ಹೋಬರ್ಟ್: ಎರಡು ವರ್ಷಗಳ ನಂತರ ಟೆನ್ನಿಸ್ ಅಂಗಳಕ್ಕೆ ಮರಳಿರುವ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಹೋಬರ್ಟ್ ಇಂಟರ್ನ್ಯಾಷನಲ್ನಲ್ಲಿ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಉಕ್ರೇನ್‌ನ ನಾಡಿಯಾ ಕಿಚೆನೊಕ್ ಜೊತೆಗೂಡಿ ಆಡುತ್ತಿರುವ ಸಾನಿಯಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ವನಿಯಾ ಕಿಂಗ್ ಮತ್ತು ಕ್ರಿಸ್ಟಿನಾ ಮೆಕ್ಹೇಲ್ ಅವರನ್ನು 6-2,4-6, 10-4ರಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಪಂದ್ಯವನ್ನು ಸಾನಿಯಾ-ಕಿಚೆನೊಕ್ ಜೋಡಿ 1 ಗಂಟೆ 24 ನಿಮಿಷಗಳ ಹೋರಾಟದಲ್ಲಿ ಗೆದ್ದುಕೊಂಡಿತು.
ಮೊದಲ ಸೆಟ್ನ ಆರಂಭದಲ್ಲೇ ಎದುರಾಳಿಯ 2 ಸರ್ವ್ ಮುರಿದು ಲೀಡ್ ಪಡೆದುಕೊಂಡರು. ಅಲ್ಲದೇ ಉತ್ತಮ ಸರ್ವೀಸ್ ಮಾಡಿ 4 ಬ್ರೇಕ್ ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಸೆಟ್ನಲ್ಲಿ ತಿರುಗಿ ಬಿದ್ದ ಕಿಂಗ್ ಮತ್ತು ಕ್ರಿಸ್ಟಿನಾ ಜೋಡಿ 6-4ರಲ್ಲಿ ಗೆದ್ದು 1-1ರಲ್ಲಿ ಸಮಬಲ ಸಾಧಿಸಿಕೊಂಡರು. ಆದರೆ, ಮೂರನೇ ಸೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಇಂಡೋ-ಉಕ್ರೇನ್ ಜೋಡಿ ತಮ್ಮ ಅದ್ಭುತ ಸರ್ವೀಸ್ ಮೂಲಕ ಅಮೆರಿಕನ್ ಜೋಡಿ ವಿರುದ್ಧ ಗೆಲುವು ಸಾಧಿಸಿತು.
ಸಾನಿಯಾ - ಕಿಚೆನೊಕ್ ಜೋಡಿ ಸೆಮಿಫೈನಲ್ನಲ್ಲಿ ಸ್ಲೊವೇನಿಯನ್-ಜೆಕ್ ಜೋಡಿಯಾದ ತಮಾರಾ ಜಿಡಾನ್ಸೆಕ್ ಮತ್ತು ಮೇರಿ ಬೌಜ್ಕೋವಾ ವಿರುದ್ಧ ಸೆಣಸಲಿದ್ದಾರೆ. ಈ ಜೋಡಿ ಕೆನೆಡಾದ ಶರೋನ್ ಫಿಚ್‌ಮಾನ್ ಹಾಗೂ ಉಕ್ರೇನ್‌ನ ಕತ್ರೀನಾ ಬೊಂಡರೆಂಕೊ ಎದುರು 6-3, 3-6, 10-4 ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ.
2017ರಲ್ಲಿ ಚೀನಾ ಓಪನ್ನಲ್ಲಿ ಕೊನೆಯಾದಾಗಿ ಟೆನ್ನಿಸ್ ಅಂಗಳದಲ್ಲಿ ಕಾಣಿಸಿಕೊಂಡಿದ್ದ ಇವರು, ಇದೀಗ 2 ವರ್ಷಗಳ ನಂತರ ಮತ್ತೆ ಟೆನ್ನಿಸ್ ಬ್ಯಾಟ್ ಹಿಡಿದು ತಮ್ಮ ಶಕ್ತಿ ಇನ್ನೂ ಕುಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.