ನವದೆಹಲಿ: ಕಾಶ್ಮೀರಕ್ಕೆ ಸಂಬಧಿಸಿದ ಸಂವಿಧಾನದ 370ನೇ ವಿಧಿ ರದ್ದತಿ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಕ ಸಂಬಂಧ ಕಡಿತಗೊಂಡಿದೆ. ಇದು ಉಭಯ ದೇಶಗಳ ನಡುವಿನ ಕ್ರೀಡಾಕೂಟ ಹಾಗು ಕ್ರೀಡಾಳುಗಳ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಡೇವಿಸ್ ಕಪ್ ಟಿನ್ನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು 55 ವರ್ಷಗಳ ನಂತರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಿದ್ದ ಭಾರತದ 6 ಟೆನ್ನಿಸ್ ಆಟಗಾರರು ಇದೀಗ ಅತಂತ್ರರಾಗಿದ್ದಾರೆ.
ಮುಂದಿನ ಸೆಪ್ಟೆಂಬರ್ 14 ಮತ್ತು 15 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಸಂವಿಧಾನದ ವಿಶೇಷ ಸ್ಥಾನಮಾನದ ರದ್ದತಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಹೀಗಾಗಿ ಭದ್ರತೆಯ ಸಮಸ್ಯೆ ಎದುರಾಗಿದ್ದು, ಡೇವಿಸ್ಕಪ್ ಟೂರ್ನಿ ನಡೆಯುವ ಸಾಧ್ಯತೆ ಕಡಿಮೆ ಇದೆ.
ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ಮಾತನಾಡಿ, ಸದ್ಯ ಯಾವುದೇ ಬದಲಾವಣೆ ಮಾಡಿಲ್ಲ. ಕೆಲ ದಿನಗಳ ಕಾಲ ಕಾದು ನೋಡುತ್ತೇವೆ. ಪರಿಸ್ಥಿತಿ ಸುಧಾರಿಸದಿದ್ದರೆ ವಿಚಾರವನ್ನು ಅಂತಾರಾಷ್ಟ್ರೀಯ ಟೆನ್ನಿಸ್ ಅಸೋಸಿಯೇಷನ್ ಗಮನಕ್ಕೆ ತರುತ್ತೇವೆ. ಈ ಬಗ್ಗೆ ಅವರೇ ತೀರ್ಮಾನಿಸುತ್ತಾರೆ ಎಂದರು.
ಅಗತ್ಯ ಬಿದ್ದರೆ, 2 ತಂಡದ ಆಟಗಾರರ ಭದ್ರತಾದೃಷ್ಟಿಯಿಂದ ಇಸ್ಲಾಮಾಬಾದ್ ಬದಲು ಬೇರೆಡೆ ಟೂರ್ನಿ ನಡೆಸುವಂತೆ ಕೇಳಿಕೊಳ್ಳುತ್ತೇವೆ ಎಂದು ಹಿರೋನ್ಮಯ್ ಚಟರ್ಜಿ ತಿಳಿಸಿದ್ರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಡೇವಿಸ್ ಕಪ್ ಕೊನೆಯ ಬಾರಿ ಫೆಬ್ರವರಿಯಲ್ಲಿ ನಡೆಯಬೇಕಿತ್ತು. ಆದರೆ ಫೆಬ್ರವರಿ 14 ರಂದು ನಡೆದಿದ್ದ ಪುಲ್ವಾಮ ಬಾಂಬ್ ದಾಳಿಯಿಂದ ಸರಣಿಯನ್ನು ಡ್ರಾ ಎಂದು ಘೋಷಿಸಲಾಗಿತ್ತು.
ಡೇವಿಸ್ ಕಪ್‌ನಲ್ಲಿ ಭಾರತ- ಪಾಕ್ ಕೊನೆಯ ಬಾರಿ 2007ರಲ್ಲಿ ಮುಖಾಮುಖಿಯಾಗಿದ್ದವು. ಆ ಸರಣಿಯಲ್ಲಿ ಭಾರತ 3-2 ರಲ್ಲಿ ಜಯ ಸಾಧಿಸಿತ್ತು. ಒಟ್ಟಾರೆ 6 ಬಾರಿ ಮುಖಾಮುಖಿಯಲ್ಲಿ 6 ರಲ್ಲೂ ಭಾರತ ತಂಡವೇ ಜಯಶಾಲಿಯಾಗಿದೆ.